newsroomkannada.com

ಪುತ್ತೂರು: ಚೂರಿ ಇರಿತಕ್ಕಾಗಿದ್ದ ಯುವತಿ ಸಾವು – ಆರೋಪಿ ಸೆರೆ

ಪುತ್ತೂರು: ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ದ್ವಾರದ ಸಮೀಪವಿರುವ ಮಹಿಳಾ ಪೊಲೀಸ್ ಠಾಣೆಯ ಎದುರಲ್ಲಿ ಹಾಡುಹಗಲೇ ಯುವತಿಯ ಮೇಲೆ ಚೂರಿ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಾಳು ಯುವತಿ ಮಂಗಳೂರಿಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ.

ಗುರುವಾರದಂದು (ಆ.24) ಮಧ್ಯಾಹ್ನ ಈ ಘಟನೆ ನಡೆದಿದ್ದು ಚೂರಿ ದಾಳಿಗೊಳಗಾದ ಯುವತಿಯನ್ನು ವಿಟ್ಲ ಮೂಲದ ಗೌರಿ (18) ಎಂದು ಗುರುತಿಸಲಾಗಿದೆ.

ಯುವತಿಯ ಮೇಲೆ ಚೂರಿ ದಾಳಿ ನಡೆಸಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಈತನನ್ನು ಮಣಿನಾಲ್ಕೂರು ಗ್ರಾಮದ ನೈಬೇಲು ನಿವಾಸಿ ಪದ್ಮರಾಜ್ ಎಂದು ಗುರುತಿಸಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸಾರ್ವಜನಿಕರ ಸಹಕಾರದೊಂದಿಗೆ ಇಲ್ಲಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.

ಇಲ್ಲಿ ಯುವತಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗುತ್ತಿತ್ತು.

ಆದರೆ ಮಂಗಳೂರಿಗೆ ಸಾಗಿಸುವ ಮಾರ್ಗ ಮಧ್ಯೆಯೇ ಯುವತಿ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.

Exit mobile version