ಸುರತ್ಕಲ್: ಶಿವಮೊಗ್ಗದಲ್ಲಿ ಇತ್ತೀಚೆಗೆ ಜೆಸಿಬಿ ಬಳಸಿ ಯತ್ನ ನಡೆಸುತ್ತಿದ್ದ ವೇಳೆ ಪೊಲೀಸ್ ಜೀಪ್ ಬಂದಿದ್ದು, ಈ ವೇಳೆ ಪೊಲೀಸರನ್ನು ಕಂಡು ದರೋಡೆಕೋರ ಪರಾರಿಯಾಗಿದ್ದ. ಇದೇ ಮಾದರಿಯ ಘಟನೆ ಸುರತ್ಕಲ್ ನಲ್ಲಿ ನಡೆದಿದೆ. ಎಟಿಎಂಗೆ ಜೆಸಿಬಿ ನುಗ್ಗಿಸಿ ಹಣ ಲಪಟಾಯಿಸಲು ವಿಫಲ ಯತ್ನ ನಡೆಸಿದ ಘಟನೆ ಸುರತ್ಕಲ್ ಸಮೀಪದ ವಿದ್ಯಾದಾಯಿನಿ ಶಾಲೆಯ ಮುಂಭಾಗದ ಜಯಶ್ರೀ ವಾಣೀಜ್ಯ ಸಂಕೀರ್ಣದಲ್ಲಿ ನಡೆದಿದೆ. ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಸೌತ್ ಇಂಡಿಯನ್ ಬ್ಯಾಂಕ್ ಬ್ರ್ಯಾಂಚ್‌ನ ಎಟಿಎಂ ಮೆಶಿನ್‌ಗೆ ಕಳೆದ ರಾತ್ರಿ ಕಳ್ಳರು ಕನ್ನ ಹಾಕಿದ್ದರು.
ಈ ವೇಳೆ ಎಟಿಎಂನ ಗಾಜು ಪುಡಿಯಾಗುತ್ತಿದ್ದಂತೆಯೇ ಎಮರ್ಜೆನ್ಸಿ ಸೈರನ್ ಆಗಿದ್ದು, ಕಳ್ಳರು ಜೆಸಿಬಿ ಸಹಿತ ಪರಾರಿಯಾಗಿದ್ದಾರೆ. ಸೈರನ್ ಕೇಳಿ ಕೆಲಹೊತ್ತಿನಲ್ಲಿ ಬ್ಯಾಂಕ್ ಮ್ಯಾನೇಜರ್ ಕೂಡ ಸ್ಥಳಕ್ಕೆ ಬಂದಿದ್ದು, ಸುರತ್ಕಲ್ ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದಾರೆ. ಬಳಿಕ ತನಿಖೆ ನಡೆಸಿದ ಪೊಲೀಸರು ಜೆಸಿಬಿಯನ್ನು ಜೋಕಟ್ಟೆಯಲ್ಲಿ ಪತ್ತೆ ಮಾಡಿದ್ದಾರೆ. ಪರಿಶೀಲನೆ ವೇಳೆ ಜೆಸಿಬಿ ಪಡುಬಿದ್ರಿ ಠಾಣೆ ವ್ಯಾಪ್ತಿಯಲ್ಲಿ ಕಳವು ಆಗಿರುವುದು ತಿಳಿದುಬಂದಿದ್ದು, ಜೆಸಿಬಿ ಕಳವು ಕುರಿತು ಪಡುಬಿದ್ರೆ ಠಾಣೆಯಲ್ಲಿ ದೂರು ದಾಖಲಾಗಿತ್ತು.