ಕಾರು ಪುಡಿಗಟ್ಟಿ, ಮಹಿಳೆಯರ ಮೇಲೆ ಹಲ್ಲೆ ಆರೋಪ
ಕುಮಟಾ: ಟೋಲ್ ಸಿಬ್ಬಂದಿಯಿಂದ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಹೊಳೆಗದ್ದೆ ಟೋಲ್ ನಲ್ಲಿ ನಡೆದಿದೆ. ಮಹಿಳೆ ಹಾಗೂ ಓರ್ವ ಪುರುಷನಿಗೆ ಗಾಯವಾಗಿದ್ದು, ಕುಮಟಾ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಟೋಲ್ನಲ್ಲಿ ಫಾಸ್ಟ್ ಟ್ಯಾಗ್ ತಾಂತ್ರಿಕ ಸಮಸ್ಯೆಯಿಂದ ಪ್ರಯಾಣಿಕರು ಮತ್ತು ಟೋಲ್ ಸಿಬ್ಬಂದಿಗಳ ನಡುವೆ ಜಗಳವಾಗಿದೆ. ಈ ವೇಳೆ ರೊಚ್ಚಿಗೆದ್ದ ಟೋಲ್ ಸಿಬ್ಬಂದಿ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿ ವಾಹನದ ಗ್ಲಾಸ್ ಪುಡಿ ಮಾಡಿದ್ದಾನೆ.
ಮಂಗಳೂರು ನಗರದ ಪಲ್ನೀರಿನ ಮುಜೀಜ್ ಎಂಬಾತನ ಕುಟುಂಬ, ಮಂಗಳೂರಿನಿಂದ ಕುಮಟಾ ಮಾರ್ಗವಾಗಿ ಗದಗದ ಲಕ್ಷ್ಮೀಶ್ವರಕ್ಕೆ ಹೋಗುತಿದ್ದರು. ಈ ವೇಳೆ ಕುಮಟಾ ಟೋಲ್ ಗೇಟ್ನಲ್ಲಿ ಫಾಸ್ಟ್ ಟ್ಯಾಗ್ನಿಂದ ಹಣ ಕಡಿತವಾಗದೇ ಸಮಸ್ಯೆಯಾದಾಗ, ಟೋಲ್ ಸಿಬ್ಬಂದಿಗಳಾದ ಕಿರಣ್, ಸತೀಶ್ ಹಾಗೂ ಮಂಜುನಾಥ್ ಎಂಬುವವರಿಂದ ಗಲಾಟೆಯಾಗಿದ್ದು, ಮಾತಿಗೆ ಮಾತು ಬೆಳೆದು ಸಹ ಸಿಬ್ಬಂದಿ ಮಜೀಜ್ ಸೈಯದ್ ರವರ ಕಾರಿನ ಗಾಜು ಪುಡಿ ಮಾಡಿದ್ದಲ್ಲದೆ, ಮಹಿಳೆಯರ ಮೇಲೆ ಸಹ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಆಯಿಷಾ, ಫಾತೀಮಾ, ಮಜೀಜ್ ಸೈಯದ್ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
