ಬೆಂಗಳೂರು: ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಯಿಂದ 5 ಕೋಟಿ ರೂ. ಹಣವನ್ನು ಪಡೆದು ವಂಚನೆ ಮಾಡಿದ ಆರೋಪದಡಿಯಲ್ಲಿ ನಿನ್ನೆ (ಸೆ.12) ರಾತ್ರಿ ಉಡುಪಿಯಲ್ಲಿ ಸಿಸಿಬಿ ಬಂಧನಕ್ಕೊಳಗಾಗಿರುವ ಚೈತ್ರಾ ಕುಂದಾಪುರ ಸಹಿತ ಈ ಪ್ರಕರಣದ ಐವರು ಆರೋಪಿಗಳನ್ನು ಇಂದು (ಸೆ.13) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
‘ಪೊಲೀಸರು ನನ್ನನ್ನು ಹಿಡಿದು ಎಳೆದಾಡಿ ನೋವು ಮಾಡಿದ್ದಾರೆ..’ ಎಂದು ಚೈತ್ರಾ ಇದೇ ಸಂದರ್ಭದಲ್ಲಿ ನ್ಯಾಯಾಧೀಶರ ಮುಂದೆ ಕಣ್ಣೀರು ಹಾಕಿದ ಘಟನೆಯೂ ವರದಿಯಾಗಿದೆ.
ಇದೀಗ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲವು ಐವರು ಆರೋಪಿಗಳನ್ನು 10 ದಿನಗಳ ಕಾಲ ಸಿಸಿಬಿ ಪೊಲೀಸರ ವಶಕ್ಕೆ ಒಪ್ಪಿಸಿದೆ.
ಉಡುಪಿ ಜಿಲ್ಲೆಯ ಬೈಂದೂರು ಮೂಲದ ಉದ್ಯಮಿ ಗೋವಿಂದ ಪೂಜಾರಿ ಅವರಿಗೆ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬೈಂದೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ನಂಬಿಸಿ 5 ಕೋಟಿ ರೂ. ಹಣವನ್ನು ಪಡೆದು, ಬಳಿಕ ವಿವಿಧ ಹಂತಗಳಲ್ಲಿ ಅವರಿಗೆ ಈ ಆರೋಪಿಗಳು ದಿಕ್ಕು ತಪ್ಪಿಸಿ ವಂಚನೆ ಎಸಗಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ನಂತರ, ಚುನಾವಣೆ ವೇಳೆ ಬಿಜೆಪಿ ಟಿಕೆಟ್ ಸಿಗದಿದ್ದರಿಂದ ಮೋಸ ಹೋಗಿರುವ ಬಗ್ಗೆ ಅರಿವಾಗಿ ಉದ್ಯಮಿ ದೂರು ಕೊಟ್ಟಿದ್ದರು. ಈ ವಂಚನೆ ಜಾಲದಲ್ಲಿ ಚೈತ್ರಾ ಕುಂದಾಪುರ ಸೇರಿದಂತೆ ಒಟ್ಟು 10 ಜನರು ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು ಎಲ್ಲರ ಮೇಲೂ ಬೆಂಗಳೂರು ಸಿಸಿಬಿಯಲ್ಲಿ ದೂರು ದಾಖಲಾಗಿದೆ.