ಮಂಗಳೂರು: ಸಿಟಿ ಬಸ್ಸು ನಿಲ್ಲಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಬಸ್ ನಿರ್ವಾಹಕನ ಮೇಲೆ ಅನ್ಯಕೋಮಿನ ಯುವಕರ ತಂಡವೊಂದು ನಿನ್ನೆ (ಸೆ.26) ರಾತ್ರಿ ಹಲ್ಲೆ ನಡೆಸಿರುವ ಘಟನೆ ಮತ್ತು ನಿರ್ವಾಹಕನ ಮೇಲೆ ಹಲ್ಲೆ ಖಂಡಿಸಿ ಬಸ್ ಸಂಚಾರ ಬಂದ್ ಮಾಡಿರುವ ಘಟನೆ ನಗರದಲ್ಲಿ ಇಂದು (ಸೆ.27) ನಡೆದಿದೆ.
ನಿನ್ನೆ ರಾತ್ರಿ (ಸೆ.26) ನಗರದ ಹೊರವಲಯದಲ್ಲಿರುವ ಕಣ್ಣೂರು ಬಳಿ ಬಸ್ ನಿಲ್ಲಿಸದೇ ಇದ್ದ ವಿಚಾರಕ್ಕೆ ಸಂಬಂಧಿಸಿ ಎಸ್.ಕೆ. ಟ್ರಾವೆಲ್ಸ್ ಹೆಸರಿನ ಬಸ್ ನಿರ್ವಾಹಕ ಯಶವಂತ ಎಂಬವರ ಮೇಲೆ ಆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಮೊದಲಿಗೆ ಹಲ್ಲೆ ನಡೆಸಿದ್ದಲ್ಲದೇ ಬಳಿಕ ಹತ್ತಕ್ಕಿಂತಲೂ ಹೆಚ್ಚು ಜನರಿದ್ದ ತಂಡ ನಿರ್ವಾಹಕನನ್ನು ಎಳೆದು ಹಾಕಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿರುವ ನಿರ್ವಾಹಕ ಯಶವಂತ್ ಸರಕಾರಿ ಆಸ್ಪತ್ರೆಗೆ ದಾಖಲುಗೊಂಡಿದ್ದಾರೆ.
ಟೈಮಿಂಗ್ಸ್ ಕಾರಣದಿಂದ ನಿರ್ವಾಹಕ ಕಣ್ಣೂರು ಬಳಿ ಬಸ್ಸನ್ನು ನಿಲ್ಲಿಸದೇ ಇದ್ದ ಕಾರಣದಿಂದ ಈ ಜಗಳ ಪ್ರಾರಂಭಗೊಂಡು ಬಳಿಕ ಹಲ್ಲೆಯಲ್ಲಿ ಅಂತ್ಯಗೊಂಡಿದೆ ಎಂದು ತಿಳಿದುಬಂದಿದೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರಿಂದ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ನಿರ್ವಾಹಕನ ಮೇಲಿನ ಹಲ್ಲೆ ಖಂಡಿಸಿ ಬಸ್ ಸಂಚಾರ ಸ್ಥಗಿತ:
ಸಿಟಿ ಬಸ್ ನಿರ್ವಾಹಕನ ಮೇಲಿನ ಹಲ್ಲೆಯನ್ನು ಖಂಡಿಸಿ ಅಡ್ಯಾರ್, ಕಣ್ಣೂರು ಭಾಗದ ಸಿಟಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಇದೇ ಸಂದರ್ಭದಲ್ಲಿ ಅಡ್ಯಾರ್ ಕಟ್ಟೆ ಭಾಗದಲ್ಲಿ ಖಾಸಗಿ ಸಿಟಿ ಬಸ್ಸು ಸಿಬ್ಬಂದಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು.
ಬಳಿಕ ಸ್ಥಳಕ್ಕಾಗಮಿಸಿದ ನಗರ ಪೊಲೀಸರು ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.