ಅರುಣ್ ಯೋಗಿರಾಜ್ ತಂಡದಲ್ಲಿದ್ದ ಇವರು ಯಾರು ಗೊತ್ತಾ ಚಿದಾನಂದ ಆಚಾರ್ಯ ಅವರ ಕುರಿತು ಇಲ್ಲಿದೆ ವಿವರ
ಅಯೋಧ್ಯೆ,: ಅಯೋಧ್ಯೆಯ ರಾಮಮಂದಿರದಲ್ಲಿ ಮೈಸೂರು ಮೂಲದ ಅರುಣ್ ಯೋಗಿರಾಜ್ ಅವರು ನಿರ್ಮಿಸಿರುವ ರಾಮಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪನೆಗೆ ಆಯ್ಕೆ ಮಾಡಲಾಗಿದೆ ಎಂದು ದೇವಸ್ಥಾನದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೋಮವಾರ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಪ್ರಸ್ತುತ ರಾಮಲಲ್ಲಾ ವಿಗ್ರಹವನ್ನು ಹೊಸ ದೇವಾಲಯದ ಗರ್ಭಗುಡಿಯಲ್ಲಿ ಇರಿಸಲಾಗುವುದು ಎಂದಿದ್ದಾರೆ. ಇನ್ನು ಶ್ರೀರಾಮಲಲ್ಲಾ ವಿಗ್ರಹವನ್ನು ಕೆತ್ತಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ತಂಡದಲ್ಲಿ ವಿಟ್ಲ ಸಮೀಪದ ಉಕ್ಕುಡ ಕಲ್ಲುರ್ಟಿ ಯಡ್ಕದ ಚಿದಾನಂದ ಆಚಾರ್ಯ ಅವರೂ ಭಾಗಿಯಾಗಿದ್ದಾರೆ. ಈ ವಿಗ್ರಹ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಆಗಲಿದೆ. ಯೋಗಿರಾಜ್ ತಂಡದಲ್ಲಿ 12 ಮಂದಿ ಇದ್ದು 8 ಮಂದಿ ಮೈಸೂರಿನವರು. ನಾಲ್ವರು ದ.ಕ. ಜಿಲ್ಲೆ ಮತ್ತು ಕೋಲಾರದವರು. 4 ತಿಂಗಳ ಹಿಂದೆ ಅರುಣ್ ಯೋಗಿರಾಜ್ ಅಯೋಧ್ಯೆಯ ರಾಮಲಲ್ಲಾ ವಿಗ್ರಹದ ಕಾರ್ಯದ ಸಹಾಯಕ ಕೆಲಸಕ್ಕೆ ಶಿಲ್ಪಿಗಳು ಬೇಕು ಎಂದು ಚಿದಾನಂದ ಆಚಾರ್ಯರಲ್ಲಿ ತಿಳಿಸಿದ್ದರು. ಇನ್ನೂ ನಾಲ್ವರ ಆವಶ್ಯಕತೆ ಇದ್ದುದರಿಂದ ಚಿದಾನಂದ ಅವರು ಪುತ್ತೂರಿನ ಸುಮಂತ್ ಆಚಾರ್ಯ, ಕೋಲಾರದ ಉಮಾಮಹೇಶ್ವರ ಹಾಗೂ ನಾರಾಯಣ ಆಚಾರ್ಯ ಅವರ ಜತೆಗೂಡಿ ಅಯೋಧ್ಯೆಗೆ ತೆರಳಿದ್ದರು.
ಚಿದಾನಂದ ಆಚಾರ್ಯರು ಅಳಿಕೆ ಗ್ರಾಮದ ಮೂವಾಜೆಯ ಗೋಪಾಲ ಆಚಾರ್ಯ ಹಾಗೂ ಪುಷ್ಪಾವತಿ ದಂಪತಿಯ ಪುತ್ರ. ಸತ್ಯಸಾಯಿ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ವರೆಗೆ ವಿದ್ಯಾಭ್ಯಾಸ ಮಾಡಿ, ಕಾರ್ಕಳದ ಕೆನರಾ ಬ್ಯಾಂಕ್ ಸಿ.ಇ. ಕಾಮತ್ ಇನ್‌ಸ್ಟಿಟ್ಯೂಟ್‌ನಲ್ಲಿ ಒಂದೂವರೆ ವರ್ಷ ಶಿಲ್ಪಕಲೆಯನ್ನು ಅಭ್ಯಸಿದ್ದಾರೆ. ಬಳಿಕ ಚಿಕ್ಕಬಳ್ಳಾಪುರದ ಡಾ| ಜಿ. ಜ್ಞಾನಾನಂದ ಅವರ ಬ್ರಹ್ಮಶ್ರೀ ಶಿಲ್ಪಗುರುಕುಲದಲ್ಲಿ ಸುಮಾರು 10 ವರ್ಷ ಕಾಲ ಶಿಲ್ಪಕಲಾ ಅಧ್ಯಯನ ನಡೆಸಿದರು