ಉಡುಪಿ: ಚಂದ್ರಯಾನ-3ರ ಮೂಲಕ ವಿಕ್ರಂ ಲ್ಯಾಂಡರನ್ನು ಚಂದಿರನ ದಕ್ಷಿಣ ಧ್ರುವ ಭಾಗದಲ್ಲಿ ಸಾಫ್ಟ್ ಲ್ಯಾಂಡಿಂಗ್ ಮಾಡುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ರಾಷ್ಟ್ರವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಈ ಕಾರ್ಯದಲ್ಲಿ ತೊಡಗಿಸಿಕೊಂಡು ಯಶಸ್ಸು ಸಾಧಿಸಿದ ಇಸ್ರೋ ವಿಜ್ಞಾನಿಗಳ ಕಾರ್ಯಕ್ಕೆ ಇದೀಗ ಪ್ರಶಂಸೆ ಮತ್ತು ಅಭಿನಂದನೆಗಳ ಸುರಿಮಳೆಯಾಗುತ್ತಿದೆ.
ಇಸ್ರೋ ವಿಜ್ಞಾನಿಗಳ ಈ ಕಾರ್ಯವನ್ನು ಅಭಿನಂದಿಸುವ ನಿಟ್ಟಿನಲ್ಲಿ ಕಲಾವಿದ ಹರೀಶ್ ಸಾಗಾ ನೇತೃತ್ವದ ‘ಸ್ಯಾಂಡ್ ಥೀಂ ಉಡುಪಿ’ ತಂಡದ ಸದಸ್ಯರು ಇಲ್ಲಿನ ಮಲ್ಪೆ ಕಡಲ ಕಿನಾರೆಯಲ್ಲಿ ಸುಂದರವಾದ ಮರಳು ಶಿಲ್ಪವನ್ನು ಬಿಡಿಸುವ ಮೂಲಕ ಇಸ್ರೋ ವಿಜ್ಞಾನಿಗಳಿಗೆ ವಿಶಿಷ್ಟವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಮರಳು ದಿಬ್ಬದ ಮೇಲ್ಭಾಗದಲ್ಲಿ ಚಂದಿರನ ಚಿತ್ರವನ್ನು ಮೂಡಿಸಿ ಕೆಳಭಾಗದಲ್ಲಿ ಭೂಪಟದಲ್ಲಿ ಭಾರತದ ಚಿತ್ರ ಮೂಡಿಬಂದಿದ್ದು ಮಧ್ಯದಲ್ಲಿ ವಿಕ್ರಂ ಲ್ಯಾಂಡರ್ ಮತ್ತು ಪ್ರಗ್ಯಾನ್ ರೋವರ್ ಹೊತ್ತ ‘ಬಾಹುಬಲಿ’ ರಾಕೆಟ್ ಮರಳು ಶಿಲ್ಪದಲ್ಲಿ ಆಕರ್ಷಕವಾಗಿ ಮೂಡಿಬಂದಿದೆ. ಇದಕ್ಕೆ ‘ಕಂಗ್ರಾಜ್ಯುಲೇಶನ್ ಇಸ್ರೋ’ ಎಂಬ ಶೀರ್ಷಿಕೆ ನೀಡಲಾಗಿದೆ.
ಮಲ್ಪೆ ಬೀಚಿನಲ್ಲಿ ಉರಿಬಿಸಿಲಿನ ನಡುವೆಯೂ ಕಲಾವಿದ ಹರೀಶ್ ಸಾಗಾ, ಸಂತೋಷ್ ಭಟ್ ಹಾಲಾಡಿ ಮತ್ತು ಉಜ್ವಲ್ ನಿಟ್ಟೆ ಸೇರಿಕೊಂಡು ಗುರುವಾರ (ಆ.24) ಬೆಳಿಗ್ಗಿನಿಂದ ಪ್ರಾರಂಭಿಸಿ ಮಧ್ಯಾಹ್ನದ ಹೊತ್ತಿಗೆ ಈ ಮರಳು ಶಿಲ್ಪಕ್ಕೊಂದು ಅಂತಿಮ ರೂಪವನ್ನು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಅಭಿನಂದಿಸಲು ‘ಸ್ಯಾಂಡ್ ಥೀಂ ಉಡುಪಿ’ ತಂಡದ ಸದಸ್ಯರು ರಚಿಸಿರುವ ಅಪೂರ್ವ ಮರಳು ಶಿಲ್ಪ ಇದೀಗ ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಲಿದೆ.