ಮಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕುರಿತು ತನಿಖೆಗೆ ರಚಿಸಲಾಗಿರುವ ವಿಶೇಷ ತನಿಖಾ ತಂಡದಲ್ಲಿ ಮಂಗಳೂರಿನ ಇಬ್ಬರು ಮಹಿಳಾ ಅಧಿಕಾರಿಗಳು ಸೇರಿ ಒಟ್ಟು 18 ಮಂದಿಯನ್ನು ನೇಮಕ ಮಾಡಲಾಗಿದೆ. ಮಂಗಳೂರು ನಗರ ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್ ಮತ್ತು ಉರ್ವಾ ಠಾಣೆ ಇನ್ಸ್ ಪೆಕ್ಟರ್ ಭಾರತಿ ಜಿ. ಅವರನ್ನು ನೇಮಿಸಲಾಗಿದೆ.
ಈಗಾಗಲೇ ಬಿಕೆ ಸಿಂಗ್ ನೇತೃತ್ವದಲ್ಲಿ ಇಬ್ಬರು ಮಹಿಳಾ ಎಸ್ಪಿಗಳನ್ನು ಒಳಗೊಂಡ ಎಸ್ಐಟಿ ತಂಡವನ್ನು ರಾಜ್ಯ ಸರಕಾರ ರಚನೆ ಮಾಡಿತ್ತು. ಇದೀಗ ತಂಡದಲ್ಲಿ ಒಟ್ಟು 18 ಜನ ಅಧಿಕಾರಿಗಳನ್ನು ಒಳಗೊಂಡ ತನಿಖಾ ತಂಡವನ್ನು ನೇಮಕ ಮಾಡಿ ಆದೇಶ ಮಾಡಲಾಗಿದೆ. ಇಬ್ಬರು ಮಹಿಳೆ ಸೇರಿ ಮೂವರು ಎಸಿಪಿ ಮಟ್ಟದ ಅಧಿಕಾರಿಗಳು ಇದ್ದಾರೆ. ಇದಲ್ಲದೆ, ಮೂವರು ಮಹಿಳಾ ಅಧಿಕಾರಿ ಸೇರಿ ಐವರು ಇನ್ಸ್ ಪೆಕ್ಟರ್ ಗಳನ್ನು ತಂಡದಲ್ಲಿ ನೇಮಕ ಮಾಡಲಾಗಿದೆ. ನಾಲ್ವರು ಪಿಎಸ್ಐಗಳಲ್ಲಿ ಮೂವರು ಮಹಿಳಾ ಅಧಿಕಾರಿಗಳು ಇದ್ದಾರೆ.
ಹಿರಿಯ ಐಪಿಎಸ್ ಅಧಿಕಾರಿಗಳಾದ ಬಿಜಯ ಕುಮಾರ್ ಸಿಂಗ್, ಸುಮನ್ ಡಿ ಪೆನ್ನೇಕರ್ ಹಾಗೂ ಮೈಸೂರು ಎಸ್ಪಿ ಸೀಮಾ ಲಾಠ್ಕರ್ ತಂಡದ ನೇತೃತ್ವ ವಹಿಸಿದ್ದು, ಇವರ ಜೊತೆಗೆ ವಿವಿಧ ಜಿಲ್ಲೆಗಳ ಅಪರಾಧ ತನಿಖೆಯಲ್ಲಿ ಹೆಸರು ಗಳಿಸಿರುವ 18 ಮಂದಿಯನ್ನು ತಂಡದಲ್ಲಿ ನೇಮಕ ಮಾಡಲಾಗಿದೆ. ಬೆಂಗಳೂರು ನಗರ ಮಾರತಹಳ್ಳಿ ಉಪ ವಿಭಾಗದ ಎಸಿಪಿ ಪ್ರಿಯದರ್ಶಿನಿ ಈಶ್ವರ್ ಸಾನಿಕೊಪ್ಪ, ಬೆಂಗಳೂರು ನಗರ ಸಿಸಿಬಿ ಘಟಕದ ಎಸಿಪಿ ಸತ್ಯನಾರಾಯಣ ಸಿಂಗ್ ಇದ್ದಾರೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಸುಮಾರಾಣಿ, ಮೈಸೂರು ನಗರ ಆಲನಹಳ್ಳಿ ಠಾಣೆ ಪಿಐ ಸ್ವರ್ಣ ಜಿ.ಎಸ್ ಮತ್ತು ಬೆಂಗಳೂರು ವೈಟ್ ಫೀಲ್ಡ್ ಸಿಇಎನ್ ಠಾಣೆಯ ಪಿಐ ಹೇಮಂತ್ ಕುಮಾರ್ ಇದ್ದಾರೆ.
ಬೆಂಗಳೂರು ನಗರ ಸಿಸಿಬಿ ಇನ್ಸ್ ಪೆಕ್ಟರ್ ರಾಜಾ ಜಿ.ಸಿ., ಉಡುಪಿ ಜಿಲ್ಲೆಯ ಮಲ್ಪೆ ಸಿಎಸ್ ಪಿ ಠಾಣೆಯ ಪಿಎಸ್ಐ ವಾಯ್ಲೆಟ್ ಫ್ಲೆಮಿನಾ, ಬೆಂಗಳೂರು ನಗರ ಸಿಸಿಆರ್ ಬಿ ಪಿಎಸ್ಐ ವಿನುತ, ಚಾಮರಾಜನಗರ ಜಿಲ್ಲೆ ಯಳಂದೂರು ಠಾಣೆ ಪಿಎಸೈ ನಂದೀಶ್, ಮೈಸೂರು ಇಲವಾಲ ಠಾಣೆಯ ಪಿಎಸ್ಐ ಕುಮುದಾ, ಕೊಡಗು ಜಿಲ್ಲೆಯ ಮಹಿಳಾ ಠಾಣೆ ಪಿಎಸೈ ಸುಮತಿ, ಹುಣಸೂರು ಠಾಣೆ ಹೆಡ್ ಕಾನ್ಸ್ ಟೇಬಲ್ ಮನೋಹರ, ಶಿರಸಿ ಠಾಣೆಯ ಬಸವರಾಜ್ ಮೈಗೇರಿ, ಬೆಂಗಳೂರು ನಗರದ ಸಿಇಎನ್ ಠಾಣೆಯ ಎಚ್.ಸಿ. ಸುನಿಲ್ ಬೆಳವಗಿ, ಮೈಸೂರು ಸಿಇಎನ್ ಠಾಣೆಯ ರಂಗಸ್ವಾಮಿ, ಸಿಂಧು ಇದ್ದಾರೆ.