Site icon newsroomkannada.com

ಹಣ ಡಬಲ್‌ ಮಾಡುವ ಆಪ್‌ ಕರಾಳ ದಂಧೆ, ಬರೋಬ್ಬರಿ 21 ಲಕ್ಷ ರೂ. ಕಳೆದುಕೊಂಡು ಕುಕ್ಕಿಪಾಡಿ ಮಹಿಳೆ ಆತ್ಮಹತ್ಯೆ

ಬಂಟ್ವಾಳ: ಇತ್ತೀಚೆಗೆ ಆಪ್‌ ಗಳ ಮೂಲಕ ಹಣ ದ್ವಿಗುಣ ಮಾಡಿಕೊಡ್ತೀವಿ ಎಂದು ನಂಬಿಸಿ ಮೋಸ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದೇ ರೀತಿ ಕರಾವಳಿಯ ಮಹಿಳೆಯೊಬ್ಬರು ಇದೇ ಹಣ ದ್ವಿಗುಣ ಮಾಡುವ ಆಪ್‌ ನಲ್ಲಿ 21 ಲಕ್ಷ ರೂ. ಹೂಡಿಕೆ ಮಾಡಿ ಮೋಸ ಹೋಗಿ ಪುಚ್ಚಮೊಗರು ಎಂಬಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಕ್ಕಿಪಾಡಿ ಗ್ರಾಮದ ಏರೋಡಿಯ ಜಾನ್ ಸಂತೋಷ್ ಡಿಸೋಜ ಅವರ ಪತ್ನಿ ವೀಟಾ ಮರಿನಾ ಡಿಸೋಜ (32) ಮೃತ ಮಹಿಳೆ. ವೀಟಾ ಅವರು ಶನಿವಾರ ರಾತ್ರಿ 9 ಗಂಟೆಗೆ ಮನೆಯಿಂದ ದ್ವಿಚಕ್ರ ವಾಹನದಲ್ಲಿ ತೆರಳಿದ್ದರು. ಬಳಿಕ ನಾಪತ್ತೆಯಾಗಿದ್ದರು. ಆ ಬಳಿಕ ವಿಷಯ ತಿಳಿದು ಸ್ಥಳೀಯರು ಹುಡುಕಾಟ ನಡೆಸಿದಾಗ ಫಲ್ಗುಣಿ ಸೇತುವೆಯಲ್ಲಿ ಇವರ ದ್ವಿಚಕ್ರ ವಾಹನ ಮಾತ್ರ ಪತ್ತೆಯಾಗಿತ್ತು. ಅಗ್ನಿಶಾಮಕದಳದ ಸಿಬ್ಬಂದಿ ನದಿಯಲ್ಲಿ ಹುಡುಕಾಡಿದ್ದರು. ಬಹುಗ್ರಾಮ ಕುಡಿಯುವ ನೀರು ಪೂರೈಕೆಗಾಗಿ ನಿರ್ಮಿಸಿರುವ ಅಣೆಕಟ್ಟೆ ಬಳಿ ಭಾನುವಾರ ಮೃತದೇಹ ಪತ್ತೆಯಾಗಿದೆ. ಅವರು ಈ ಹಿಂದೆ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು ಬಳಿಕ ಕೆಲಸ ಬಿಟ್ಟು ವಿಮಾ ಪ್ರತಿನಿಧಿಯಾಗಿದ್ದರು.

Exit mobile version