Site icon newsroomkannada.com

ಉಡುಪಿ ಕಾಲೇಜು ವಿಡಿಯೋ ಬಳಿಕ ಮತ್ತೊಂದು ಪ್ರಕರಣ: ಫ್ಯಾಷನ್ ಶೋ ವೇಳೆ ನಿಜಕ್ಕೂ ಆಗಿದ್ದೇನು

ನವದೆಹಲಿ: ಉಡುಪಿಯ ಕಾಲೇಜೊಂದರ ಶೌಚಾಲಯದಲ್ಲಿ ಮೊಬೈಲ್‌ ಕ್ಯಾಮರಾ ಇರಿಸಿ ವಿಡಿಯೋ ಮಾಡಿದ ಪ್ರಕರಣ ದೇಶದೆಲ್ಲೆಡೆ ಸುದ್ದಿ ಮಾಡಿತ್ತು. ಇದೀಗ ಅಂತಹುದೇ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಾಶ್ ರೂಂನಲ್ಲಿ ವಿದ್ಯಾರ್ಥಿನಿಯರ ವಿಡಿಯೋ ರೆಕಾರ್ಡ್ ಮಾಡಿದ ಆರೋಪದ ಮೇಲೆ ದೆಹಲಿ ಪೊಲೀಸರು 20 ವರ್ಷದ ಸ್ವೀಪರ್ ನನ್ನು ಬಂಧಿಸಿದ್ದಾರೆ. ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಈ ಸಂಬಂಧ ‘ಎಕ್ಸ್’ ಮೂಲಕ ದೂರು ಸ್ವೀಕರಿಸಲಾಗಿತ್ತು.

ಭಾರ್ತಿ ಕಾಲೇಜಿನ ದೂರುದಾರೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ದೆಹಲಿ ಐಐಟಿಯಲ್ಲಿ ನಡೆದ ಫ್ಯಾಷನ್ ಶೋ ವೇಳೆ ತಾವು ಅನುಭವಿಸಿದ ಸಂಕಟವನ್ನು ಹಂಚಿಕೊಂಡಿದ್ದಾರೆ.
“6.10.23 ರಂದು, ELANTRÈ IIT ದೆಹಲಿ ಫ್ಯಾಶನ್ ಶೋನಲ್ಲಿ ಭಾಗವಹಿಸಿದ್ದ ವೇಳೆ ನಿಜವಾಗಿಯೂ ಆಘಾತಕಾರಿ ಅನುಭವವಾಯಿತು. ಕೆಲವು ಹುಡುಗಿಯರು ವಾಶ್‌ರೂಮ್‌ನಲ್ಲಿ ಬಟ್ಟೆ ಬದಲಿಸುತ್ತಿದ್ದಾಗ ಹೌಸ್ ಕೀಪರ್ ಒಬ್ಬರು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಇದು ನಾಚಿಕೆಗೇಡು! ಆದರೆ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ಮಹಿಳೆಯೊಬ್ಬರು ಅಕ್ಟೋಬರ್ 6 ರಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ಅವರ ದೂರಿನ ಆಧಾರದ ಮೇಲೆ, ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಹೆಣ್ಣಿನ ಮೇಲಿನ ದೌರ್ಜನ್ಯ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು, ಐಐಟಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ಯುವಕನನ್ನು ಬಂಧಿಸಿದ್ದಾರೆ.

Exit mobile version