ರೈಲಿನಡಿಗೆ ಬಿದ್ದು ಅವಿವಾಹಿತ ಯುವಕನೊಬ್ಬ ಆತ್ಮಹತ್ಯೆಗೈದ ಘಟನೆ ಉಳ್ಳಾಲ ತಾಲೂಕಿನ ಉಚ್ಚಿಲ ರೈಲ್ವೇ ಗೇಟ್ ಬಳಿ ಭಾನುವಾರ ರಾತ್ರಿ ನಡೆದಿದ್ದು, ಛಿದ್ರಗೊಂಡ ಮೃತದೇಹ ರೈಲಿನಡಿಯಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ ರೈಲನ್ನು ನಿಲ್ಲಿಸಿ ಹೊರ ತೆಗೆಯಲಾಗಿದೆ.
ಉಳ್ಳಾಲ, ಸೆ.25: ರೈಲಿನಡಿಗೆ ಬಿದ್ದು ಅವಿವಾಹಿತ ಯುವಕನೊಬ್ಬ ಆತ್ಮಹತ್ಯೆಗೈದ ಘಟನೆ ಉಳ್ಳಾಲ ತಾಲೂಕಿನ ಉಚ್ಚಿಲ ರೈಲ್ವೇ ಗೇಟ್ ಬಳಿ ಭಾನುವಾರ ರಾತ್ರಿ ನಡೆದಿದ್ದು, ಛಿದ್ರಗೊಂಡ ಮೃತದೇಹ ರೈಲಿನಡಿಯಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ ರೈಲನ್ನು ನಿಲ್ಲಿಸಿ ಹೊರ ತೆಗೆಯಲಾಗಿದೆ.
ಮಂಗಳೂರು ನಗರದ ಕೊಂಚಾಡಿ ನಿವಾಸಿ ಪ್ರಶಾಂತ್ (44) ಆತ್ಮಹತ್ಯೆಗೈದ ಯುವಕ. ಆದಿತ್ಯವಾರ ಸಂಜೆ ಮನೆಯಿಂದ ಹೊರಟ ಪ್ರಶಾಂತ್ ರಾತ್ರಿ ಶವವಾಗಿ ಪತ್ತೆಯಾಗಿದ್ದಾರೆ. ಆಕ್ಟಿವಾ ಸ್ಕೂಟರಲ್ಲಿ ಬಂದ ಪ್ರಶಾಂತ್ ಸ್ಕೂಟರನ್ನು ಉಳ್ಳಾಲ ರೈಲ್ವೇ ನಿಲ್ದಾಣದಲ್ಲಿರಿಸಿ, ಉಚ್ಚಿಲ ರೈಲ್ವೇ ಗೇಟ್ ವರೆಗೆ ಹಳಿಯಲ್ಲಿ ನಡೆದುಕೊಂಡು ಹೋಗಿ ರೈಲಿನಡಿಗೆ ಹಾರಿ ಆತ್ಮಹತ್ಯೆಗೈದಿದ್ದಾರೆ. ಅವಿವಾಹಿತರಾಗಿದ್ದ ಪ್ರಶಾಂತ್ ಪಾನಮತ್ತರಾಗಿ ಕೃತ್ಯವನ್ನು ಎಸಗಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಘಟನಾ ಸ್ಥಳಕ್ಕೆ ಮಂಗಳೂರು ರೈಲ್ವೇ ಪೊಲೀಸ್ ಠಾಣೆಯ ಎಎಸ್ಐ ಮಧುಚಂದ್ರ ನೇತೃತ್ವದ ಪೊಲೀಸ್ ತಂಡ ಭೇಟಿ ನೀಡಿ ಪ್ರಕರಣ ದಾಖಲಿಸಿದೆ.
ತುರ್ತು ನಿಲುಗಡೆಯಾದ ರೈಲು!: ಆದಿತ್ಯವಾರ ರಾತ್ರಿ 8.15 ರ ಸುಮಾರಿಗೆ ಘಟನೆ ನಡೆದಿದೆ. ಪೋರ್ ಬಂದರ್ – ಕೊಚ್ಚುವೆಲಿ ನಡುವೆ ಸಂಚರಿಸುವ ರೈಲಿನಡಿಗೆ ಬಿದ್ದು ಪ್ರಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈಲು ಸೋಮೇಶ್ವರ, ಉಚ್ಚಿಲ ಗೇಟ್ ದಾಟುತ್ತಿದ್ದಂತೆ ಬೋಗಿಯಡಿ ಶಬ್ದ ಕೇಳಿಬಂದಿದ್ದು, ದುರ್ವಾಸನೆ ಇರುವುದನ್ನು ಗಮನಿಸಿದ ಉಚ್ಚಿಲ ಸ್ಟೇಷನ್ ಮಾಸ್ಟರ್, ತಕ್ಷಣ ರೈಲಿನ ಲೋಕೊ ಪೈಲೆಟ್ ಗೆ ಮಾಹಿತಿಯನ್ನು ರವಾನಿಸಿದ್ದಾರೆ. ಉಚ್ಚಿಲ ಗೇಟ್ ನಿಂದ 2 ಕಿಮೀ ದೂರ ಚಲಿಸಿದ್ದ ರೈಲಿನಡಿ ಛಿದ್ರಗೊಂಡ ಮೃತದೇಹ ಸಿಲುಕಿಕೊಂಡಿತ್ತು. ತಕ್ಷಣ ಲೋಕೊಪೈಲಟ್ ರೈಲನ್ನ ತುರ್ತಾಗಿ ನಿಲ್ಲಿಸಿದ್ದಾರೆ. ಬೋಗಿಗಳಡಿ ಛಿದ್ರವಾಗಿ ಚಕ್ರಗಳಿಗೆ ಸಿಲುಕಿದ್ದ ಮೃತದೇಹದ ಮಾಂಸ ಖಂಡಗಳನ್ನ ಕ್ಷಿಪ್ರವಾಗಿ ತೆರವುಗೊಳಿಸಿ ಮರಣೋತ್ತರ ಪರೀಕ್ಷೆಗೆ ರವಾನಿಸಿ ರೈಲು ಸುಗಮ ಸಂಚಾರಕ್ಕೆ ರೈಲ್ವೇ ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ