Site icon newsroomkannada.com

ತಂದೆಯ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಭಯಾನವಾಗಿ ಸೇಡು ತೀರಿಸಿದ ಕೃಷಿ ವಿಜ್ಞಾನಿ

ಗಂಡ, ಅತ್ತೆ-ಮಾವ ಸೇರಿ ಐವರನ್ನು ವಿಷವಿಕ್ಕಿ ಕೊಂದ ಮಹಿಳೆ

ನಾಗಪುರ: ತನ್ನ ತಂದೆ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣರಾದ ಗಂಡ ಮತ್ತು ಅವನ ಮನೆಯವರ ವಿರುದ್ಧ ಮಹಿಳೆಯೊಬ್ಬಳು ಸೇಡು ತೀರಿಸಿಕೊಂಡ ರೀತಿ ಯಾವ ಬಾಲಿವುಡ್‌ ಕ್ರೈಂ ಥ್ರಿಲ್ಲರ್‌ ಸಿನೇಮಾದ ಕಥೆಗಿಂತಲೂ ಕಡಿಮೆಯಿಲ್ಲ. ಕೇವಲ 20 ದಿನಗಳ ಅವಧಿಯಲ್ಲಿ ಗಂಡ, ಅತ್ತೆ, ಮಾವ ಸೇರಿ ಐವರನ್ನು ಸದ್ದಿಲ್ಲದೆ ಮುಗಿಸಿದ್ದಳು ಈಕೆ. ಆದರೆ ಒಂದೇ ಕುಟುಂಬದ ಐವರು ಬರೀ 20 ದಿನಗಳಲ್ಲಿ ಸತ್ತ ಬಗ್ಗೆ ಅನುಮಾನಗೊಂಡು ತೀವ್ರವಾಗಿ ತನಿಖೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ನಕ್ಸಲ್‌ ಹಾವಳಿಯಿರುವ ಮಹಾರಾಷ್ಟ್ರದ ಗಢ್‌ಚಿರೋಳಿಯ ಮಹಾಗಾಂವ್‌ ಎಂಬ ಗ್ರಾಮದಲ್ಲಿ ನಡೆದ ಘಟನೆಯಿದು. ಕೃಷಿ ವಿಜ್ಞಾನ ಪದವೀಧರೆ ಸಂಘಮಿತ್ರಾ ಮತ್ತು ಆಕೆಯ ಸ್ನೇಹಿತೆ ರೋಸಾ ರಾಮ್‌ಟೇಕೆ ಎಂಬವರನ್ನು ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಅಕೊಲಾದ ಸಂಘಮಿತ್ರಾ, ರೋಶನ್‌ ಕುಂಭಾರೆ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದಳು. ಆದರೆ ಈ ಪ್ರೀತಿ ಹೆಚ್ಚು ದಿನ ಉಳಿಯಲಿಲ್ಲ. ಮದುವೆಯಾದ ಕೆಲವೇ ತಿಂಗಳಲ್ಲಿ ಪತಿ, ಅತ್ತೆ, ಮಾವ ಸಂಘಮಿತ್ರಾಳಿಗೆ ಕಿರುಕುಳ ನೀಡತೊಡಗಿದರು. ಮಗಳ ಬದುಕು ಹೀಗಾದುದನ್ನು ನೋಡಿ ಕೊರಗಿ ಸಂಘಮಿತ್ರಾಳ ತಂದೆ ಐದು ತಿಂಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ತಂದೆಯ ಸಾವಿಗೆ ಗಂಡ ಮತ್ತವನ ಮನೆಯವರು ಕಾರಣ ಎಂದು ಸೇಡಿನಿಂದ ಭುಸುಗುಡತೊಡಗಿದಳು ಸಂಘಮಿತ್ರಾ.

ಹೇಗಾದರೂ ಗಂಡನ ಮನೆಯವರಿಗೆ ಬುದ್ಧಿಕಲಿಸಬೇಕೆಂದು ಹವಣಿಸುತ್ತಿದ್ದವಳಿಗೆ ಜತೆಯಾದದ್ದು ದೂರದ ಸಂಬಂಧಿಯೂ ಆದ ರೋಸಾ. ಈಕೆಗೂ ಸಂಘಮಿತ್ರಾಳ ಗಂಡನ ಮನೆಯವ ಮೇಲೆ ಹಳೆಯ ಸಿಟ್ಟಿತ್ತು. ಇಬ್ಬರೂ ಸೇರಿ ಕೊಲೆಗೆ ಯೋಜನೆ ರೂಪಿಸಿದರು. ಈ ಸಂದರ್ಭದಲ್ಲಿ ಸಂಘಮಿತ್ರಾಳಿಗೆ ಅವಳು ಕಲಿತ ಕೃಷಿ ವಿಜ್ಞಾನ ನೆರವಿಗೆ ಬಂತು.

ಬಣ್ಣ, ರುಚಿ, ವಾಸನೆ ಯಾವುದೂ ಇಲ್ಲದ ಥಾಲಿಯಂ ಎಂಬ ರಾಸಾಯನಿಕದಿಂದ ಸಾಯಿಸಬಹುದು ಎಂದು ಆಕೆಗೆ ತಿಳಿದಿತ್ತು. ರೋಸಾಳ ಸಹಾಯದಿಂದ ಪಕ್ಕದ ತೆಲಂಗಾಣದಿಂದ ಸಂಘಮಿತ್ರಾ ಈ ರಾಸಾಯನಿಕ ತರಿಸಿ ಸೆ.20 ರಂದು ಮಾವ ಶಂಕರ ಕುಂಭಾರೆ ಮತ್ತು ಅತ್ತೆ ವಿಜಯಾ ಕುಂಭಾರೆಯ ಊಟದಲ್ಲಿ ಬೆರೆಸಿಕೊಟ್ಟಳು. ಅವರು ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಫಲಿಸದೆ ಸೆ.26ರಂದು ಸಾವಿಗೀಡಾದರು.

ಕುಟುಂಬ ಈ ಸಾವಿನ ಸೂತಕದಲ್ಲಿರುವಾಗಲೇ ಸಂಘಮಿತಾಳ ಗಂಡ ರೋಷನ್ ಮತ್ತು ನಾದಿನಿಯರಾದ ಕೋಮಲ್ ದಹಗೋಕರ್ ಮತ್ತು ಆನಂದಾ ಇದೇ ರೀತಿಯ ಅನಾರೋಗ್ಯಕ್ಕೀಡಾಗಿ ಅ. 8 ಮತ್ತು ಅ.15ರ ನಡುವೆ ಮರಣ ಹೊಂದಿದರು. ಕುಟುಂಬದ ಇನ್ನೂ ಕೆಲವರು ಅಸ್ವಸ್ಥರಾದರೂ ಸಕಾಲಿಕ ಚಿಕಿತ್ಸೆಯಿಂದ ಬದುಕುಳಿದರು. ಬೆನ್ನುಬೆನ್ನಿಗೆ ಸಂಭವಿಸಿದ ಸಾವುಗಳಿಗೆ ದೋಷಪೂರಿತ ಆಹಾರ ಕಾರಣ ಎಂದು ಕಥೆ ಕಟ್ಟಿ ಊರಿನವರನ್ನು ನಂಬಿಸುವಲ್ಲಿ ಸಂಘಮಿತ್ರಾ ಯಶಸ್ವಿಯಾಗಿದ್ದಳು.

ಆದರೆ ಸರಣಿ ಸಾವಿನಿಂದ ಊರು ತಲ್ಲಣಗೊಂಡಿತ್ತು. ವೈದ್ಯರು ವಿಷಪ್ರಾಶನದ ಬಗ್ಗೆ ಅನುಮಾನಿಸಿದರೂ, ಪ್ರಾಥಮಿಕ ಪರೀಕ್ಷೆಗಳಿಂದ ಅದನ್ನು ಖಚಿತಪಡಿಸಲು ಸಾಧ್ಯವಾಗಲಿಲ್ಲ. ಇಡೀ ಕುಟುಂಬದಲ್ಲಿ ಒಬ್ಬಳು ಮಾತ್ರ ಅನಾರೋಗ್ಯಕ್ಕೀಡಾಗದೆ ಉಳಿದದ್ದು ಪೊಲೀಸರ ಅನುಮಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ತೀವ್ರ ವಿಚಾರಣೆ ನಡೆಸಿದಾಗ ಸಂಘಮಿತ್ರಾ ಸತ್ಯ ಬಾಯಿಬಿಟ್ಟಿದ್ದಾಳೆ.

ವಿವಾಹದ ನಂತರ ರೋಶನ್‌ ಹಾಗೂ ಅತ್ತೆ ತನ್ನನ್ನು ಹೊಡೆಯುತ್ತಿದ್ದರು ಎಂದು ಆಕೆ ಕೋಪಗೊಂಡಿದ್ದಳು. ಮಗಳ ಸ್ಥಿತಿಯಿಂದ ಕೊರಗಿ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗೆಯೇ ಒಮ್ಮೆ ಆಕೆ ಹೊಡೆತ ತಿಂದು ಅಳುತ್ತ ಮನೆ ಹೊರಗೆ ಕುಳಿತಾಗ ಸಂಬಂಧಿ ರೋಸಾ, ಆಕೆಗೆ ಸಮಾಧಾನ ಮಾಡಿದ್ದಳು. ತಾನು ಕೂಡ ಕುಂಭಾರೆ ಕುಟುಂಬದ ಮೇಲೆ ದ್ವೇಷ ಹೊಂದಿದ್ದಾಗಿ ಹೇಳಿದಳು. ಆಗ ತಾವಿಬ್ಬರೂ ಸಮಾನದುಃಖಿಗಳು ಎಂದು ಹೇಳಿಕೊಂಡು, ಕೊಲೆ ಸಂಚು ರೂಪಿಸಿದರು ಎಂದು ಗೊತ್ತಾಗಿದೆ. ಬುಧವಾರ ಸಂಘಮಿತ್ರ ಹಾಗೂ ರೋಸಾಳನ್ನು ಪೊಲೀಸರು ಬಂಧಿಸಿದ್ದಾರೆ.

Exit mobile version