ಮಂಗಳೂರು: ಇಲ್ಲಿನ ಪಣಂಬೂರು ಬೀಚ್ ಪರಿಸರದಲ್ಲಿ ಕೋಟ್ಯಾಂತರ ಬೆಲೆಬಾಳುವ ಅಪರೂಪದ ವನ್ಯಜೀವಿ ಉತ್ಪನ್ನವಾದ ಅಂಬರ್ ಗ್ರೀಸ್ (ತಿಮಿಂಗಲ ವಾಂತಿ) ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಸಿ.ಸಿ.ಬಿ ಪೊಲೀಸರು ಬಂಧಿಸಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಅಂಬರ್ ಗ್ರೀಸನ್ನು ವಶಪಡಿಸಿಕೊಂಡಿದ್ದಾರೆ.
ತಮಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಸೆ.11ರಂದು ದಾಳಿ ನಡೆಸಿ ಆರೋಪಿಗಳನ್ನು ಮಾಲು ಸಹಿತ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ಬಳಿಯಲ್ಲಿದ್ದ, 900 ಗ್ರಾಂ ತೂಕದ 90 ಲಕ್ಷ ರೂಪಾಯಿ ಬೆಲೆಬಾಳುವ ಅಂಬರ್ ಗ್ರೀಸನ್ನು ವಶಪಡಿಸಿಕೊಳ್ಳಲಾಗಿದೆ. ತಿಮಿಂಗಿಲದ ವಾಂತಿ ಎಂದೇ ಕರೆಯಲಾಗುವ ಈ ಅಂಬರ್ ಗ್ರೀಸ್ ಉತ್ಪನ್ನಕ್ಕೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ.
ಬಂಧಿತರನ್ನು ಉಡುಪಿಯ ಸಾಲಿಗ್ರಾಮ ನಿವಾಸಿ ಜಯಕರ (29 ), ಶಿವಮೊಗ್ಗ ಜಿಲ್ಲೆಯ ಸಾಗರದ ಆದಿತ್ಯ (25) ಮತ್ತು ಹಾವೇರಿ ಜಿಲ್ಲೆಯ ಶಿಗ್ಗಾಂ ಮೂಲದ ಲೋಹಿತ್ ಕುಮಾರ್ ಗುರಪ್ಪನವರ್ (39) ಎಂದು ಗುರುತಿಸಲಾಗಿದೆ.
ಮಂಗಳೂರು ನಗರದ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಮಾರ್ಗದರ್ಶನದಲ್ಲಿ ಸಿ.ಸಿ.ಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಯವರ ನೇತೃತ್ವದಲ್ಲಿ ಈ ದಾಳಿ ನಡೆದಿದೆ.