main logo

ಫೆ. 11ರಂದು ಅಲೆವೂರಾಯಾಭಿನಂದನಮ್‌

ಫೆ. 11ರಂದು  ಅಲೆವೂರಾಯಾಭಿನಂದನಮ್‌

ಮಂಗಳೂರು: ವರ್ಕಾಡಿ ರವಿ ಅಲೆವೂರಾಯರ ಷಷ್ಠಬ್ಧಿ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ ಅಲೆವೂರಾಯಾಭಿನಂದನಮ್‌ ಕಾರ್ಯಕ್ರಮ ಫೆ. 11ರಂದು ಮಂಗಳೂರು ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಬೆಳಗ್ಗೆ 9ರಿಂದ ರಾತ್ರಿ 9.30ರವರೆಗೆ ನಡೆಯಲಿದೆ ಎಂದು ಕದ್ರಿ ಮಲ್ಲಿಕಾ ಕಲಾವೃಂದ ಕಾರ್ಯಾಧ್ಯಕ್ಷ ಸುಧಾಕರ್‌ ರಾವ್‌ ಪೇಜಾವರ ತಿಳಿಸಿದರು.

ಮಂಗಳೂರು ಪ್ರೆಸ್‌ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಬೆಳಗ್ಗೆ 9ರಿಂದ 11ರವರೆಗೆ ಪೊರ್ಕೋಡಿ ಸೋಮನಾಥೇಶ್ವರ ಯಕ್ಷನಿಧಿ ತಂಡದಿಂದ ಮಾತೆ ಭದ್ರಕಾಳಿ ಯಕ್ಷಗಾನ ಬಯಲಾಟವಿದೆ ಎಂದರು. ಬೆಳಗ್ಗೆ 11ರಿಂದ 12ರವರೆಗೆ ಕೊಮೆ ತೆಕ್ಕಟ್ಟೆ ಯಶಸ್ವಿ ಕಲಾವೃಂದ ಮಕ್ಕಳ ಮೇಳ ಸದಸ್ಯರಿಂದ ಕೃಷ್ಣಾರ್ಜುನ ತಾಳಮದ್ದಳೆ ಪ್ರದರ್ಶನವವಿದೆ ಎಂದು ವಿವರಿಸಿದರು. ಮಧ್ಯಾಹ್ನ 12ರಿಂದ 1ರವರೆಗೆ ಕದ್ರಿ ಮಹಿಳಾ ಯಕ್ಷಗಾನ ಬಳಗ ಸದಸ್ಯರಿಂದ ಯಕ್ಷ ಮಂಜುಳಾ ಮಹಿಳಾ ಯಕ್ಷಗಾನ ತಾಳಮದ್ದಳೆ ಮೋಕ್ಷ ಸಂಗ್ರಾಮ ನಡೆಯಲಿದೆ ಎಂದರು.
ಮಧ್ಯಾಹ್ನ 1ರಿಂದ 2.30ರವರೆಗೆ ಮಂಗಳೂರು ರಥಬೀದಿ ನವಭಾರತ ಯಕ್ಷಗಾನ ಅಕಾಡೆಮಿ ಸದಸ್ಯರಿಂದ ಶ್ರೀ ದೇವಿ ಮಹಿಷಮರ್ದಿನಿ ತಾಳಮದ್ದಳೆ ನಡೆಯಲಿದೆ ಎಂದು ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಮಧ್ಯಾಹ್ನ 2.30ರಿಂದ ಅತಿಥಿ ಕಲಾವಿದರು ಹಾಗೂ ಸರಯೂ ಯಕ್ಷ ವೃಂದ ಕಲಾವಿದರ ಕೂಡುವಿಕೆಯಲ್ಲಿ ರವೆ ಅಲೆವೂರಾಯ ವಿರಚಿತ ಇಳಾರಜತ ಬಯಲಾಟ ಪ್ರದರ್ಶನವಿರಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಧರ್ಮದರ್ಶಿ

ಡಾ. ಹರಿಕೃಷ್ಣ ಪುನರೂರು, ವಿಜಯಲಕ್ಷ್ಮಿ ಎಲ್‌. ನಿಡ್ವಣ್ಣಾಯ, ಪ್ರಮೋದ್‌, ವೀಣಾ ಕೆ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮ ವಿವರ”
ಅಲೆವೂರಾಯಾಭಿನಂದನಮ್‌ ಸಭಾ ಕಾರ್ಯಕ್ರಮ ಸಾಯಂಕಾಲ 5.30ರಿಂದ ನಡೆಯಲಿದ್ದು, ಎಡನೀರು ಮಠದ ಸಚ್ಚಿದಾನಂದ ಭಾರತೀ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ.
ಹನುಮಗಿರಿ ಮೇಳದ ಯಜಮಾನ ಟಿ. ಆರ್‌ ಶ್ಯಾಮ ಭಟ್‌ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಡಾ. ಪಿವಿ ಶೆಣೈ (ಪ್ರಾಂತ ಕಾರ್ಯಕಾರಿಣಿ ಸದಸ್ಯರು ಕರ್ನಾಟಕ ದಕ್ಷಿಣ), ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ ಪುರಾಣಿಕ್‌, ಶಾಸಕ ವೇದವ್ಯಾಸ ಕಾಮತ್‌, ಶಾಸಕ ವೈ ಭರತ್‌ ಶೆಟ್ಟಿ, ಮಂಗಳೂರು ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಯಕ್ಷ ಗಾನ ವಿದ್ವಾಂಸ ಡಾ. ಎಂ ಪ್ರಭಾಕರ ಜೋಷಿ, ಹಿರಿಯ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ ಮೊದಲಾದವರು ಪಾಲ್ಗೊಳ್ಳುವರು ಕಾರ್ಯಕ್ರಮ ನಂತರ ಇಳಾ ರಜತ ಯಕ್ಷಗಾನ ಬಯಲಾಟ ಮುಂದುವರಿಯಲಿದೆ.

ಅಲೆವೂರಾಯರ ಸಾಧನೆ ಕುರಿತು:
ಯಕ್ಷಗಾನ ರಂಗದಲ್ಲಿ ನಿಸ್ಪೃಹವಾಗಿ ಅಹಿರ್ನಿಶಿ ದುಡಿವ ನುರಿತ ರಂಗ ಕಲಾವಿದ ವರ್ಕಾಡಿ ರವಿ ಅಲೆವೂರಾಯರು. ಕಾಸರಗೋಡು ಮಂಜೇಶ್ವರದ ವರ್ಕಾಡಿಯ ಪ್ರತಿಭೆ. ಆರನೇ ವಯಸ್ಸಿನಲ್ಲೇ ಬಣ್ಣ ಹಚ್ಚಿದ. ಕಲಾವಿದ, ೧: ಮುಂದಿಲ ಕೃಷ್ಣ ಭಟ್ ಹಾಗೂ ತಂದೆ ದಿ। ಲಕ್ಷ್ಮೀನಾರಾಯಣ ಅಲೆವೂರಾಯರಿಂದ ನಾಟ್ಯ- ಅರ್ಥಗಾರಿಕೆ ಅಭ್ಯಾಸ ಹಾಗೂ ನಾವಡ ಕುಟುಂಬದ ಒಡನಾಟದಿಂದ ಯಕ್ಷಗಾನದಲ್ಲಿ ಪರಿಪಕ್ವತೆ, ಅಂತಾರಾಷ್ಟ್ರೀಯ ಕಲಾವಿದ ಶ್ರೀ ಪಿ. ವಿ. ಪರಮೇಶ್ವರಿಂದ ನಾಟ್ಯದ ಪರಿಪೂರ್ಣತೆಯ ಪಾಠ. ಪ್ರೊ| ಎಂ. ಎಲ್. ಸಾಮಗರ ನಿರಂತರ ಸಾಂಗತ್ಯ ಇವರಲ್ಲಿನ ಕಲಾವಿದರನ್ನು ಬೆಳೆಸಿತು. ಹೈಸ್ಕೂಲ್, ಕಾಲೇಜುಗಳಲ್ಲೇ, ವೇಷಧಾರಿಯಾಗಿ ಪ್ರಸಿದ್ದಿ ಮೊದಲು ಪುಂಡುವೇಷಗಳಲ್ಲೇ ಬೆಳೆದರೆ, ನಂತರ ಪ್ರಮುಖ ಪ್ರಸಿದ್ಧ ಸ್ತ್ರೀ ಪಾತ್ರಧಾರಿಯಾಗಿ ಬೆಳವಣಿಗೆ, ಕನ್ನಡ, ಹಿಂದಿ, ಸಂಸ್ಕೃತ, ಮಲಯಾಳ, ತುಳು, ಕೊಂಕಣಿ, ಆಂಗ್ಲಭಾಷೆ ಹಾಗೂ ಬಂಗಾಳಿ ಭಾಷೆಗಳ ಯಕ್ಷಗಾನಗಳಲ್ಲಿ ಭಾಗವಹಿಸಿ, ನಿರ್ದೇಶಿಸಿದ ಏಕೈಕ ಕಲಾವಿದ ಅಲೆವೂರಾಯರು, ಏಕವ್ಯಕ್ತಿ ಯಕ್ಷಗಾನದಲ್ಲೂ ಗುರಿಸಾಧಿಸಿ 130 ಕಾರ್ಯಕ್ರಮಗಳನ್ನು ನೀಡಿದವರು. ಸರಯೂ ತಂಡವೇ ಸೇರಿದಂತೆ ಅನೇಕ ತಂಡಗಳಿಗೆ ಯಕ್ಷಗುರುವಾಗಿ ಯಶಸ್ವಿ ನಿರ್ದೇಶಕರಾಗಿದ್ದಾರೆ. ಆನೇಕ ಅರ್ಥಸಹಿತ ಪುಸ್ತಕಗಳನ್ನು ಬರೆದು ಲೇಖಕನೆನಿಸಿಕೊಂಡವರು. ಪ್ರಸಂಗ ಕರ್ತರಾಗಿಯೂ ಪ್ರಸಿದ್ದರು.

Related Articles

Leave a Reply

Your email address will not be published. Required fields are marked *

error: Content is protected !!