Site icon newsroomkannada.com

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಕ್ಯಾಂಪಸ್‌ನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಆಳ್ವಾಸ್ ಪ್ರಗತಿ -2023 ಬೃಹತ್ ಉದ್ಯೋಗ ಮೇಳಕ್ಕೆ ಸಂಸದ ನಳಿನ್ ಕುಮಾರ್ ಚಾಲನೆ ನೀಡಿದರು.

ನಂತರ ಮಾತನಾಡಿ, ದೇಶದಲ್ಲಿ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡುತ್ತಿರುವ ಪ್ರಧಾನಿ ಮೋದಿ ಕೇಂದ್ರ ಸರ್ಕಾರವು ಈಗಾಗಲೇ 9 ಲಕ್ಷ ಜನರಿಗೆ ಉದ್ಯೋಗವಾಕಾಶವನ್ನು ಕಲ್ಪಿಸಿದೆ. ಸರ್ಕಾರ ಮಾಡಬೇಕಾದಂತಹ ಅತ್ಯಂತ ಕಠಿಣವಾದ ಕೆಲಸವನ್ನು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯು ಕಳೆದ 13 ವರ್ಷಗಳಿಂದ ಮಾಡುತ್ತಾ ಬರುತ್ತಿದ್ದು, ಇಲ್ಲಿನ ಜನರಿಗೆ ನಮ್ಮ ದೇಶದಲ್ಲಿಯೇ ಉದ್ಯೋಗವಕಾಶವನ್ನು ನೀಡುವ ಮೂಲಕ ಪ್ರಧಾನಿ ಮೋದಿ ಕನಸನ್ನು ಸಾಕಾರಗೊಳಿಸುತ್ತಿದ್ದಾರೆಂದು ಹೇಳಿದರು.

ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯೋಗಾಕಾಂಕ್ಷಿಗಳು ಕೇವಲ ಡಿಗ್ರಿಯನ್ನು ಪಡೆದರೆ ಮಾತ್ರ ಸಾಲದು ತಾವು ಸಂದರ್ಶನಕ್ಕೆ ತೆರಳುವಾಗ ಡ್ರೆಸ್ ಕೋಡ್, ಗುಣ ನಡತೆ, ನೀಟ್ ನೆಸ್ ಕೂಡಾ ಪ್ರಮುಖವಾಗಿರುತ್ತದೆ ಆದ್ದರಿಂದ ಈ ಬಗ್ಗೆಯೂ ತಮ್ಮ ಗಮನವಿರಬೇಕೆಂದು ಸಲಹೆ ನೀಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ಹೊರ ದೇಶದಲ್ಲಿ ಯುವಶಕ್ತಿ ಕುಂಠಿತವಾಗುತ್ತಿದೆ. ನಿರಾಶೆಯನ್ನು ಹೊಂದುತ್ತಿದ್ದಾರೆ. ಅವರಲ್ಲಿ ಮಾನವ ಸಂಪನ್ಮೂಲ ಕಡಿಮೆಯಾಗುತ್ತಿದೆ ಆದ್ದರಿಂದ ಅವರ ಕಣ್ಣು ನಮ್ಮ ದೇಶದ ಮೇಲಿದೆ. ಕ್ಷಣಿಕ ಸುಖಕ್ಕಾಗಿ ಹೊರ ದೇಶಗಳಿಗೆ ಹೋಗಬೇಡಿ. ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿ. ನೀವು ನಿಮ್ಮ ಕುಟುಂಬದ ಬಗ್ಗೆ ದೀರ್ಘವಾದ ಅಲೋಚನೆ ಮಾಡಿ ನಿಮ್ಮ ಒಟ್ಟು ಬದುಕನ್ನು ಅಲೋಕಿಸಿ ನೋಡಿ ಆಗ ನಿಮಗೆ ನಮ್ಮ ದೇಶವೇ ನಮಗೆ ಶ್ರೇಷ್ಠವೆಂದೆನಿಸುತ್ತದೆ ಎಂದು ಹೇಳಿದರು.

13,600ಕ್ಕೂ ಅಧಿಕ ಹುದ್ದೆಗಳಿಗಾಗಿ 206 ಕ್ಕೂ ಹೆಚ್ಚು ಪ್ರಸಿದ್ಧ ಬಹುರಾಷ್ಟ್ರೀಯ ಹಾಗೂ ಸ್ಥಳೀಯ ಸೇರಿದಂತೆ ವಿವಿಧ ವಲಯಗಳ ಕಂಪೆನಿಗಳ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು.

Exit mobile version