Site icon newsroomkannada.com

ಬಳ್ಳಾರಿ ಬಿಜೆಪಿ ಸಂಸದನ ಪುತ್ರನ ವಿರುದ್ಧ ಲವ್, ಸೆಕ್ಸ್, ದೋಖಾ ಆರೋಪ

ಬೆಂಗಳೂರು: ಬಳ್ಳಾರಿ ಬಿಜೆಪಿ ಸಂಸದ ದೇವೇಂದ್ರಪ್ಪ ಅವರ ಪುತ್ರ ರಂಗನಾಥ್ ಅವರು ಯುವತಿಯೊಬ್ಬರಿಗೆ ಮದುವೆಯಾಗುವುದಾಗಿ ನಂಬಿಸಿ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ವಂಚಿಸಿದ ಆರೋಪ ಕೇಳಿಬಂದಿದೆ.
ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸರಾಗಿ ಕಾರ್ಯನಿರ್ವಹಿಸುತ್ತಿರುವ ರಂಗನಾಥ್ ಅವರ ವಿರುದ್ಧ ಬೆಂಗಳೂರು ಮೂಲದ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಿಸಿಕೊಂಡು ಇದೀಗ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.
ಒಂದೂವರೆ ವರ್ಷದ ಹಿಂದೆ ಪಾರ್ಟಿವೊಂದರಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡಿರುವ ರಂಗನಾಥ್, ಬಳಿಕ ಮೈಸೂರಿನ ಹೋಟೆಲ್​ನಲ್ಲಿ ಆಕೆಯ ಜೊತೆ ಲೈಂಗಿಕ ಸಂಪರ್ಕ ಬೆಳೆಸಿದ್ದಾರೆ ಎಂದು ಆರೋಪಿಸಲಾಗಿದೆ. ಆದರೆ ಈಗ ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಇಬ್ಬರಿಗೂ ನೋಟಿಸ್ ಜಾರಿ ಮಾಡಿದ್ದಾರೆ. ವಿಚಾರಣೆಗೆ ಬರುವಂತೆ ರಂಗನಾಥ್ ಅವರಿಗೆ ನೋಟಿಸ್ ನೀಡಲಾಗಿದೆ ಮತ್ತು ಯುವತಿಗೆ ಸೂಕ್ತ ದಾಖಲೆ ಸಮೇತ ಠಾಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಲಾಗಿದೆ.
ರಂಗನಾಥ್ ಅವರು ಸಹ ಯುವತಿ ವಿರುದ್ಧ ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ದಾಖಲಿಸಿದ್ದಾರೆ. ನನ್ನ ಖಾಸಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಯುವತಿ ನನಗೆ ಬ್ಲಾಕ್‌ಮೇಲ್ ಮಾಡುತ್ತಿದ್ದು, 15 ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವುದಾಗಿ ಎಂದು ಆರೋಪಿಸಿದ್ದಾರೆ. ಈ ಸಂಬಂಧ ವಿಜಯನಗರ ಪೊಲೀಸರು ಸಂತ್ರಸ್ಥ ಯುವತಿ ಮತ್ತು ಮತ್ತೊಬ್ಬ ವ್ಯಕ್ತಿ ಶ್ರೀನಿವಾಸ್ ಎಂಬುವವರ ವಿರುದ್ಧ ದೂರು ದಾಖಲಿಸಿದ್ದಾರೆ.

Exit mobile version