ಮುಂಬೈ: ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಎನ್ಸಿಪಿಯ ಅಜಿತ್ ಪವಾರ್ 9 ನಾಯಕರೊಂದಿಗೆ ಮಹಾರಾಷ್ಟ್ರ ಸರ್ಕಾರಕ್ಕೆ ಸೇರ್ಪಡೆಗೊಂಡಿದ್ದಾರೆ. ಪವಾರ್ ಅವರು ಬಿಜೆಪಿಯ ದೇವೇಂದ್ರ ಫಡ್ನವಿಸ್ ಅವರೊಂದಿಗೆ ಉಪಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳಲಿದ್ದಾರೆ. ಪಕ್ಷದ ಮೂಲಗಳ ಪ್ರಕಾರ, 53 ಎನ್‌ಸಿಪಿ ಶಾಸಕರ ಪೈಕಿ 43 ಶಾಸಕರ ಬೆಂಬಲವನ್ನು ಅಜಿತ್ ಪವಾರ್ ಹೊಂದಿದ್ದಾರೆ.
ಮಹಾರಾಷ್ಟ್ರ ಅಸೆಂಬ್ಲಿಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಕೆಳಗಿಳಿಯುವ ಇಚ್ಛೆಯನ್ನು ಪವಾರ್ ಸಾರ್ವಜನಿಕವಾಗಿ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ ಈ ಮಹತ್ವದ ಬೆಳವಣಿಗೆ ನಡೆದಿದೆ. ಇಂದು ಮುಂಜಾನೆ, ಎನ್‌ಸಿಪಿ ಶಾಸಕರ ಗುಂಪು ಅಜಿತ್ ಪವಾರ್ ಅವರ ಮುಂಬೈ ನಿವಾಸದಲ್ಲಿ ಸಭೆ ನಡೆಸಿತು, ಅಲ್ಲಿ ಪಕ್ಷದ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಲೆ ಮತ್ತು ಹಿರಿಯ ನಾಯಕ ಛಗನ್ ಭುಜಬಲ್ ಕೂಡ ಹಾಜರಿದ್ದರು. ಪಕ್ಷದ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಸಭೆಗೆ ಹಾಜರಾಗಿರಲಿಲ್ಲ.