main logo

ಕೈಲಾಗದು ಎಂದು ಕೈ ಕಟ್ಟಿ ಕುಳಿತುಕೊಳ್ಳುವಂತಿಲ್ಲ – ಯಾಕಂದ್ರೆ ಇವರಿಗೆ ಒಂದು ಕೈಯೇ ಇಲ್ಲ!

ಕೈಲಾಗದು ಎಂದು ಕೈ ಕಟ್ಟಿ ಕುಳಿತುಕೊಳ್ಳುವಂತಿಲ್ಲ – ಯಾಕಂದ್ರೆ ಇವರಿಗೆ ಒಂದು ಕೈಯೇ ಇಲ್ಲ!

ವರದಿ ಉಮೇಶ ಎಚ್‌ . ಎಸ್‌. ಕೋಟ: ತೆಕ್ಕಟ್ಟೆ ಕೊಮೆಯ ನಾಗರಾಜ ಬೆಂಗಳೂರಿನ ಹೋಟೆಲ್‌ ವೊಂದರಲ್ಲಿ ಕೆಲಸಕ್ಕಿದ್ದರು. ಬೇಡಪ್ಪ ಬೇಡ ಈ ಮಹಾನಗರಿಯ ಸಹವಾಸ ಎಂದು 13 ವರ್ಷದ ಊರಿಗೆ ಮರಳಿ ಹೆಂಚಿನ ಕಾರ್ಖಾನೆಯೊಂದರಲ್ಲಿ ಕಾರ್ಮಿಕನಾಗಿ ಬದುಕು ನಡೆಸುತ್ತಿದ್ದರು. ಆದರೆ ನಾಗರಾಜರ ಬದುಕಿನಲ್ಲಿ ಕರಾಳ ದಿನವೊಂದು ಎದುರಾಯಿತು. ಹೆಂಚಿನ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ವೇಳೆ ಆಕಸ್ಮಿಕವಾಗಿ ಎಡಗೈ ಯಂತ್ರಕ್ಕೆ ಸಿಲುಕಿ ಅರ್ಧಕ್ಕೆ ಕೈ ತುಂಡಾಯಿತು. ಇದು ಅವರ ಬದುಕಿನಲ್ಲಿ ಬಹುದೊಡ್ಡ ಆಘಾತ ಎದುರಾದ ದಿನ. ನಂತರ ಆಸ್ಪತ್ರೆಯಲ್ಲಿ ಕೆಲ ದಿನಗಳು ಕಳೆದ ಬಳಿಕ ಮತ್ತೆ ಮನೆಗೆ ಮರಳಿದರು. ಆದರೆ ಮನದಲ್ಲಿ ಶೂನ್ಯವಾದ ಭಾವವಿತ್ತು. ಕೈ ಕಳೆದುಕೊಂಡಿದ್ದೇನೆ ಎಂಬ ಭಾವನೆ ಬಹುವಾಗಿ ಕಾಡುತ್ತಿತ್ತು. ಆದರೆ ಮನೆಯವರು, ಅಣ್ಣ ತಮ್ಮಂದಿರು ನೆರವಿಗೆ ನಿಂತರು. ಆಗಿದ್ದು ಆಗಿ ಹೋಯಿತು. ಅದನ್ನೆ ನೆನೆದು ವಿಧಿಯನ್ನು ಶಪಿಸಿ ಪ್ರಯೋಜನವಿಲ್ಲ. ಮುಂದಿನ ಬದುಕಿನ ಬಗ್ಗೆ ಯೋಚಿಸುವಂತೆ ಪ್ರೇರಿಪಿಸಿದರು. ಅಲ್ಲದೆ ಆ ವೇಳೆ ನಾಗರಾಜ ಅವರ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಸುಜಾತಾ ಅವರು ನಾಗರಾಜ ಅವರ ಸಂಕಷ್ಟಕ್ಕೆ ಮರುಗಿದರು. ಕೇವಲ ಮರುಗಿದ್ದಲ್ಲ ನಾಗರಾಜ ಅವರನ್ನೆ ಮದುವೆಯಾಗಿ ನಿಜವಾದ ಸ್ತ್ರೀತತ್ವಕ್ಕೆ ಕನ್ನಡಿಯಾದರು. ಮುಂದೆ ನಡೆದಿದ್ದೆಲ್ಲ ಇತಿಹಾಸ. ನಾಗರಾಜ ಅವರನ್ನು ಕೈ ಹಿಡಿದ ಸುಜಾತಾ ಅವರು ಕೃಷಿಯಲ್ಲಿ ತೊಡಗಿಸಿಕೊಳ್ಳುವಂತೆ ಸಲಹೆ ನೀಡಿದರು. ಆದರೆ ಸ್ವಂತ ಭೂಮಿಯಿಲ್ಲ ಎನ್ನುವ ಪ್ರಶ್ನೆ ಮೂಡಿತು. ಗೇಣಿ ಭೂಮಿಯಲ್ಲಿ ದಂಪತಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದು, ಹಡಿಲು ಬಿದ್ದ ಭೂಮಿಯನ್ನು ಹಸನು ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ನೆಲಗಡಲೆ, ಅವಡೆ, ಭತ್ತ ಮೊದಲಾದ ಕೃಷಿಯನ್ನು ನಡೆಸುವ ಮೂಲಕ ಬದುಕು ಸಾಗಿಸುವುದು ಎಂದರೆ ಹೀಗೆ ನಿರೂಪಿಸಿದ್ದಾರೆ. ಇದೀಗ ನಾಗರಾಜ ಅವರು ಭತ್ತ ಕೃಷಿ ಮುಗಿಸಿ ನೆಲಗಡಲೆ ಬೆಳೆಯನ್ನು ಬೆಳೆದಿದ್ದು, ಕಟಾವಿಗೆ ಬರುವ ಹಂತದಲ್ಲಿದೆ. ನೆಲಗಡಲೆ ಬೆಳೆಯನ್ನು ದಂಪತಿ ಹತ್ತಿರದ ಅಂಗಡಿಯೊಂದಕ್ಕೆ ಮಾರಾಟ ಮಾಡುತ್ತಾರೆ.

ಬೈಕ್‌ ಓಡಿಸಲು ವಿಶೇಷ ಸಲಕರಣೆ: ನಾಗರಾಜ ಅವರು ಕೈ ಇಲ್ಲದ ಕಾರಣ ಬೈಕ್‌ ಚಲಾಯಿಸಲು ವಿಶೇಷವಾದ ಕಬ್ಬಿಣದ ಸಲಕರಣೆಯೊಂದನ್ನು ವೆಲ್ಡಿಂಗ್‌ ಶಾಪ್‌ ನವರಲ್ಲಿ ಹೇಳಿ ತಯಾರಿಸಿಕೊಂಡಿದ್ದಾರೆ. ಈ ಸಲಕರಣೆಯ ಮೂಲಕ ಸಾಮಾನ್ಯರಿಗಿಂತಲೂ ನುರಿತ ಸವಾರರಂತೆ ಬೈಕ್‌ ರೈಡ್‌ ಮಾಡುತ್ತಾರೆ. ಸಣ್ಣ ಓಣಿಗಳಲ್ಲಿಯೂ ಅವರು ಬೈಕ್‌ ಬಿಡುವ ಪರಿ ಎಂತವರಿಗೂ ಅಚ್ಚರಿ ಮೂಡಿಸದಿರದು.

ಚಕಚಕನೆ ಟ್ರಾಕ್ಟರ್‌ ಏರಿ ಉಳುಮೆ ಮಾಡುವ ಪರಿ ಎಂತವರಿಗೂ ಅಚ್ಚರಿ: ನಾಗರಾಜ ಅವರು ಭೂಮಿ ಉಳುಮೆಗೆ ಟ್ರ್ಯಾಕ್ಟರ್‌ ಟಿಲ್ಲರ್‌ ಬಳಕೆ ಮಾಡುತ್ತಿದ್ದಾರೆ. ಅಲ್ಲದೆ ಬಾಡಿಗೆ ಆಧಾರದಲ್ಲಿಯೂ ಕೂಡ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಳುಮೆ ಕಾರ್ಯ ಮಾಡುತ್ತಾರೆ. ಒಂದು ಕೈಯನ್ನು ಕಳೆದುಕೊಂಡಿದ್ದರೂ ಕೂಡ ಬಲಗೈಯಲ್ಲಿಯೇ ಟ್ರಾಕ್ಟರ್‌ ಮೂಲಕ ಉಳುಮೆ ಮಾಡುತ್ತಾರೆ. ಟ್ರ್ಕ್ಯಾಕ್ಟರ್‌ ಚಲಾವಣೆ ಕಾರು, ಬೈಕ್‌ ಓಡಿಸಿದಂತೆ ಸಲೀಸಲಲ್ಲ. ಮೈಯಲ್ಲ ನಜ್ಜುಗುಜ್ಜಾಗುತ್ತದೆ. ಆದರೆ ನಾಗರಾಜ ಅವರು ಇಂತಹ ಕಾರ್ಯವನ್ನು ಒಂದೇ ಕೈ ಯಲ್ಲಿ ಮಾಡುವ ಮೂಲಕ ಸಾಧಿಸುವ ಛಲವಿದ್ದರೆ ಸಾಧನೆಗೆ ಹಲವು ಮಾರ್ಗವಿದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ನಾಗರಾಜ ಅವರು ಕೇವಲ ಒಂದೇ ದಿನದಲ್ಲಿ ಟ್ರ್ಕ್ಯಾಕ್ಟರ್‌ ಡ್ರೈವಿಂಗ್‌ ಕಲಿತಿದ್ದು ಅವರ ಕಲಿಕೆಯ ಛಲಕ್ಕೆ ಮತ್ತೊಂದು ಉದಾಹರಣೆ.

ಕಟ್ಟಿಗೆ ಒಡೆಯಲು ರೆಡಿ: ನಾಗರಾಜ ಅವರು ಕಟ್ಟಿಗೆ ಒಡೆಯುವ ವಿಧಾನ ಸ್ವಲ್ಪ ಡಿಫರೆಂಟ್‌ ಸಾಮಾನ್ಯವಾಗಿ ಕಟ್ಟಿಗೆ ಒಡೆಯುವ ವೇಳೆ ಎಲ್ಲರೂ ಕಟ್ಟಿಗೆಯನ್ನು ಅಡ್ಡವಾಗಿ ಇರಿಸುತ್ತಾರೆ. ಆದರೆ ನಾಗರಾಜ ಅವರು ಕಟ್ಟಿಗೆಯನ್ನು ಉದ್ದಕ್ಕೆ ಇರಿಸಿ ಒಂದೇ ಏಟಿಗೆ ಸೀಳುತ್ತಾರೆ. ಈ ತರ ಕಟ್ಟಿಗೆ ಒಡೆಯುವುದನ್ನು ನೋಡುತ್ತಿದ್ದರೆ ಮೈ ರೋಮಾಂಚನವಾಗುತ್ತದೆ.

ಬಾಡಿಗೆ ಮರ ಕತ್ತರಿಸುವ ಯಂತ್ರ ಬೇಕೆ: ನಾಗರಾಜ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಲೇ ಇರುತ್ತಾರೆ. ಭತ್ತ ಕೃಷಿ, ನೆಲಗಡಲೆ ಬೆಳೆ ಬೆಳೆಯುವ ನಡುವೆ ಅವರು ಮರ ಕತ್ತರಿಸುವ ಕೆಲಸಕ್ಕೂ ಹೋಗುತ್ತಾರೆ. ಮರ ಕತ್ತರಿಸುವ ಯಂತ್ರವನ್ನು ಅವರು ಕತ್ತರಿಸಿದ್ದು, ಈ ಯಂತ್ರವನ್ನು ಒಂದೇ ಕೈಯಲ್ಲಿ ಸಲೀಸಾಗಿ ನಿರ್ವಹಣೆ ಮಾಡುತ್ತಾರೆ.

ದಿ.ಬಸವ ಮೊಗವೀರ ಮತ್ತು ಪುಟ್ಟಿ ದಂಪತಿಯ 6 ಮಕ್ಕಳ ಪೈಕಿ ನಾಗರಾಜ ಅವರು ಕಿರಿಯರು. 4ನೇ ತರಗತಿ ತನಕ ಓದಿಕೊಂಡಿರುವ ಅವರಿಗೆ ಇಬ್ಬರು ಹೆಣ್ಣುಮಕ್ಕಳು ಶಾಲಾ ವಿದ್ಯಾರ್ಥಿಗಳಾಗಿದ್ದಾರೆ

Related Articles

Leave a Reply

Your email address will not be published. Required fields are marked *

error: Content is protected !!