ಮಧ್ಯಪ್ರದೇಶ: ಮಧ್ಯಪ್ರದೇಶ ರಾಜ್ಯವು ಇತ್ತೀಚೆಗೆ ಹಲವು ವಿವಾದತ್ಮಕ ವಿಚಾರಗಳಿಗಾಗಿ ಸುದ್ದಿಯಾಗುತ್ತಿದೆ. ಆದಿವಾಸಿ ವ್ಯಕ್ತಿ ಮೇಲೆ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಪ್ರಕರಣ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಮತ್ತೊಂದು ಆಘಾತಕಾರಿ, ಹೇಯ ಕೃತ್ಯ ಬಹಿರಂಗವಾಗಿದೆ. ಇಬ್ಬರು ದಲಿತ ಯುವಕರಿಗೆ ಮಲ ತಿನಿಸಿ ಮೆರವಣಿಗೆ ಮಾಡಲಾಗಿದೆ.
ಮಧ್ಯಪ್ರದೇಶದ ಶಿವಗಿರಿ ಎಂಬಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಇಬ್ಬರು ದಲಿತ ಯುವಕರ ಮುಖಕ್ಕೆ ಮಸಿ ಬಳಿದು, ಮಲ ತಿನಿಸಿ, ಚಪ್ಪಲಿ ಹಾರ ಹಾಕಿ ಊರೆಲ್ಲಾ ಮೆರವಣಿಗೆ ಮಾಡಲಾಗಿದೆ. ಅಲ್ಲದೆ ಅವರ ಮನೆಯನ್ನೂ ದ್ವಂಸ ಮಾಡಲಾಗಿದೆ. ಜೂನ್ 30ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಪ್ರಕರಣ ಸಂಬಂಧ ಇಬ್ಬರು ಮಹಿಳೆಯರು ಸೇರಿ 7 ಜನರನ್ನು ಬಂಧಿಸಲಾಗಿದೆ.
23 ಮತ್ತು 24 ವರ್ಷ ವಯಸ್ಸಿನ ಇಬ್ಬರು ದಲಿತ ಯುವಕರು ಆರೋಪಿ ಕುಟುಂಬದ ಯುವತಿ(26) ಯೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದಾರೆ. ಈ ವಿಷಯ ತಿಳಿದ ಮನೆಯವರು ಆ ಇಬ್ಬರು ಯುವಕರನ್ನು ಮನೆಗೆ ಕರೆಸುವಂತೆ ಯುವತಿಗೆ ಒತ್ತಾಯಿಸಿದ್ದಾರೆ. ಅದರಂತೆ ಯುವಕರ ಜೂನ್ 30 ರಂದು ಯುವತಿಯ ಮನೆಗೆ ಬಂದಾಗ ಕುಟುಂಬಸ್ಥರೆಲ್ಲ ಸೇರಿಕೊಂಡು ಯುವಕರ ಮೇಲೆ ಹಲ್ಲೆ ನಡೆಸಿ, ಮುಖಕ್ಕೆ ಕಪ್ಪು ಮಸಿ ಬಳಿದು, ಮಲವನ್ನು ತಿನ್ನುವಂತೆ ಒತ್ತಾಯಿಸಿದ್ದಾರೆ. ಚಪ್ಪಲಿ ಹಾರ ಹಾಕಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ತಮ್ಮ ಮನೆಯ ಯುವತಿಗೆ ಕಿರುಕುಳ ನೀಡಿದ್ದಕ್ಕಾಗಿ ಮತ್ತು ಅನುಚಿತವಾಗಿ ಸ್ಪರ್ಶಿಸಿದ್ದಕ್ಕಾಗಿ ಇಬ್ಬರು ಯುವಕರನ್ನು ಥಳಿಸಿದ್ದಾಗಿ ಕುಟುಂಬಸ್ಥರು ಹೇಳಿಕೆ ನೀಡಿದ್ದಾರೆ. ತನಿಖೆಯ ಸಂದರ್ಭದಲ್ಲಿ ಕುಟುಂಬದವರ ಹೇಳಿಕೆಗಳು ಸುಳ್ಳು ಎಂದು ಸಾಬೀತಾಗಿದ್ದು ಆರೋಪಿಗಳು ತಮ್ಮನ್ನು ಲೈಂಗಿಕ ಕಿರುಕುಳದ ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದಾರೆ ಎಂದು ದಲಿತ ಯುವಕರು ಕಣ್ಣೀರಿಟ್ಟಿದ್ದಾರೆ. ನಮ್ಮನ್ನು ಭೇಟಿಯಾಗಲು ಕರೆದ ನಂತರ ನಾವು ಅವರ ಮನೆಗೆ ಹೋದೆವು. ನಾವು ಯಾವುದೇ ಅಪರಾಧ ಮಾಡಿಲ್ಲ ಎಂದಿದ್ದಾರೆ.