Site icon newsroomkannada.com

ಕಲ್ಲಾಪಿನಲ್ಲಿ ಸ್ಕೂಟರ್‌ ಅಪಘಾತ ಸ್ಕೂಟರ್‌ ಸಹ ಸವಾರ ಸಾವು, ಮತ್ತೋರ್ವ ಗಂಭೀರ

ಉಳ್ಳಾಲ, ಮೇ.16: ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಧಾವಿಸುತ್ತಿದ್ದ ಸ್ಕೂಟರಿಗೆ ಕಲ್ಲಾಪು ಜಂಕ್ಷನ್ ನಲ್ಲಿ ಹೆದ್ದಾರಿ ಕ್ರಾಸ್ ಮಾಡುತ್ತಿದ್ದ ಮತ್ತೊಂದು ಸ್ಕೂಟರ್‌ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಹ ಸವಾರ ಸಾವನ್ನಪ್ಪಿದ್ದ ಘಟನೆ ನಡೆದಿದೆ.
ಉಳ್ಳಾಲ ಕೋಟೆಪುರ, ಕೋಡಿ ನಿವಾಸಿ ಅಹಮ್ಮದ್ ನಿಷಾದ್ (22) ಮೃತ ಯುವಕ ನಿಷಾದ್ ಇಂದು ಮುಂಜಾನೆ ನಾಲ್ಕು ಗಂಟೆಯ ವೇಳೆಗೆ ಸಯ್ಯದ್ ಹಫೀಝ್ ಎಂಬವರೊಂದಿಗೆ ಸ್ಕೂಟರಲ್ಲಿ ಸಹ ಸವಾರನಾಗಿ ಮಂಗಳೂರಿನಿಂದ ತೊಕ್ಕೊಟ್ಟಿಗೆ ಬರುತ್ತಿದ್ದ ವೇಳೆ ಕಲ್ಲಾಪು ಜಂಕ್ಷನ್ ನಲ್ಲಿ ತೊಕ್ಕೊಟ್ಟಿನಿಂದ ಬಂದು ಗ್ಲೋಬಲ್ ಮಾರ್ಕೆಟ್ ಗೆ ಕ್ರಾಸ್ ಆಗುತ್ತಿದ್ದ ಸ್ಕೂಟರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ಸ್ಕೂಟರ್ ಸವಾರರು ರಸ್ತೆಗೆಸೆಯಲ್ಪಟ್ಟಿದ್ದಾರೆ. ಗಂಭೀರ ಗಾಯಗೊಂಡ ನಿಷಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಸ್ಕೂಟರ್ ಸವಾರ ಹಫೀಝ್ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮತ್ತೋರ್ವ ಸ್ಕೂಟರ್ ಸವಾರ ಕುತ್ತಾರು ಪದವು ನಿವಾಸಿ ಅಬೂಬಕ್ಕರ್ ಸಿದ್ದೀಕ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ರಾ.ಹೆ. 66 ರ ನಂತೂರಿನಿಂದ ತಲಪಾಡಿ ತನಕದ ಹೆದ್ದಾರಿ ಅಗಲೀಕರಣ ಕಾಮಗಾರಿಯು ಸಂಪೂರ್ಣ ಅವೈಜ್ಞಾನಿಕವಾಗಿದ್ದು ಸಮರ್ಪಕ ಸರ್ವಿಸ್ ರಸ್ತೆಗಳನ್ನೇ ನೀಡದ ನವಯುಗ ಕಂಪನಿಯು ವಾಹನ ಸವಾರರಲ್ಲಿ ಟೋಲ್ ಪೀಕಿಸಿ ಹಗಲು ದರೋಡೆ ನಡೆಸುತ್ತಿದೆ. ಸರ್ವಿಸ್ ರಸ್ತೆಗಳಿಲ್ಲದೆ ಹೆದ್ದಾರಿ ನಡುವಲ್ಲೇ ಅವೈಜ್ಞಾನಿಕ ಕ್ರಾಸಿಂಗ್ ನೀಡಿದ ಪರಿಣಾಮ ಈ ಹೆದ್ದಾರಿಯಲ್ಲಿ ನರಬಲಿಗಳು ನಿತ್ಯ ಎನ್ನುವಂತಾಗಿವೆ. ಕಲ್ಲಾಪು ಜಂಕ್ಷನ್ ನಲ್ಲಂತೂ ಹೆದ್ದಾರಿಯನ್ನು ದಾಟೋದೇ ದೊಡ್ಡ ಸಾಹಸವಾಗಿದ್ದು ಇಲ್ಲಿ ಅಂಡರ್ ಪಾಸ್ ನಿರ್ಮಿಸಬೇಕೆಂಬುವುದು ಸ್ಥಳೀಯರ ಅನೇಕ ವರ್ಷಗಳ ಬೇಡಿಕೆಯಾಗಿದೆ.

 

Exit mobile version