ಮಂಗಳೂರು: ಮಿನಿ ಲಾರಿ, ಕಾರು ಮತ್ತು ಬಸ್ಸಿನ ನಡುವೆ ಸರಣಿ ಅಪಘಾತ ನಡೆದಿದ್ದು ಲಾರಿ – ಬಸ್ಸಿನ ನಡುವೆ ಅಪ್ಪಚ್ಚಿಯಾಗಿದ್ದ ಕಾರಿನ ಚಾಲಕನನ್ನ ಸ್ಥಳೀಯರು ಮತ್ತು ವಾಹನ ಸವಾರರು ಹೊರಗೆಳೆದು ರಕ್ಷಿಸಿದ ಘಟನೆ ರಾ.ಹೆ.66 ರ ಜಪ್ಪಿನಮೊಗರು ಎಂಬಲ್ಲಿ ನಡೆದಿದೆ.
ಮಂಗಳೂರಿನ ಜಪ್ಪಿನಮೊಗರು ಹೆದ್ದಾರಿಯಲ್ಲಿ ಶನಿವಾರ ಮಧ್ಯಾಹ್ನ ಘಟನೆ ನಡೆದಿದ್ದು ತಲಪಾಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಮಿನಿ ಲಾರಿಯೊಂದು ಕಾರೊಂದಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಲಾರಿಯ ಹಿಂದೆ ಚಲಿಸುತ್ತಿದ್ದ ಕಾರನ್ನು ಚಾಲಕನು ಹಠಾತ್ತನೇ ಬ್ರೇಕ್ ಹೊಡೆದು ನಿಲ್ಲಿಸಿದ್ದು ಈ ಕಾರಿಗೆ ಹಿಂದಿನಿಂದ ವೇಗವಾಗಿ ಧಾವಿಸುತ್ತಿದ್ದ ಕೇರಳ ಸರಕಾರಿ ಸಾರಿಗೆಯ ಮಲಬಾರ್ ಬಸ್ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ಎದುರಲ್ಲಿ ನಿಂತಿದ್ದ ಲಾರಿಗೆ ಅಪ್ಪಳಿಸಿ ಅಪ್ಪಚ್ಚಿಯಾಗಿದೆ. ಅಪ್ಪಚ್ಚಿಯಾದ ಕಾರಲ್ಲಿ ತಲಪಾಡಿ ನಿವಾಸಿ ಮಂಗಳೂರಿನ ಎಂಸಿಎಫ್ ಉದ್ಯೋಗಿ, ಚಾಲಕನಾಗಿದ್ದ ದಿನೇಶ್ ಎಂಬವರು ಸಿಲುಕಿದ್ದು ಆತನನ್ನ ಸ್ಥಳೀಯರು ಮತ್ತು ವಾಹನ ಸವಾರರು ಹರಸಾಸಹ ಪಟ್ಟು ಹೊರಗೆಳೆದು ಆಸ್ಪತ್ರೆ ಸೇರಿಸಿದ್ದಾರೆ. ಕಾರು ಚಾಲಕ ಗಂಭೀರ ಗಾಯಗೊಂಡಿದ್ದಾರೆ.