ಮಂಗಳೂರು: ನಗರದಲ್ಲಿ ಕಳ್ಳರು ಆಧಾರ್ ಬಯೋಮೆಟ್ರಿಕ್ ದತ್ತಾಂಶಗಳನ್ನು ಕದ್ದು ನಂತರ ಜನರ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಎಗರಿಸಿದ ಪ್ರಕರಣಗಳ ತನಿಖೆಯನ್ನು ಮಂಗಳೂರಿನ ಸೈಬರ್ ಪೊಲೀಸರು ತೀವ್ರಗೊಳಿಸಿದ್ದು ಬಿಹಾರದಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದುಬಂದಿದೆ.
ಇತ್ತೀಚೆಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೋಂದಣಿಗಾಗಿ ಬಯೋಮೆಟ್ರಿಕ್ಸ್ ಮತ್ತು ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಮ್ (ಎಇಪಿಎಸ್) ವಿವರಗಳನ್ನು ತೆಗೆದುಕೊಂಡ ನಂತರ ಅನೇಕರು ಹಣ ಕಳೆದುಕೊಂಡಿದ್ದರು. ಈ ಬಗ್ಗೆ 15 ಮಂದಿ ಈಗಾಗಲೇ ಪೊಲೀಸರಿಗೆ ದೂರು ನೀಡಿದವರಲ್ಲಿ, ಓರ್ವ ಪೊಲೀಸ್ ಅಧಿಕಾರಿಯೂ ಸೇರಿದ್ದರು.
ದೂರು ದಾಖಾಲಾದ ಬಳಿಕ ತನಿಖಾಧಿಕಾರಿಗಳು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಪರಿಶೀಲನೆ ನಡೆಸಿದ್ದು ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಅಲ್ಲದೆ ರಾಜ್ಯದ ಬೇರೆ ಕಡೆಗಳಲ್ಲಿಯೂ ಇದೇ ರೀತಿ ಬಯೋಮೆಟ್ರಿಕ್, ಆಧಾರ್ ಮಾಹಿತಿ ಪಡೆದು ವಂಚಿಸಿರುವ ಘಟನೆಗಳು ವರದಿಯಾಗಿದ್ದವು.
ಹೀಗಾಗಿ ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಸೈಟ್ ಹ್ಯಾಕ್ ಆಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಕಾರ್ಯಾಚರಣೆ ನಡೆಸಿ ಬಿಹಾರದಲ್ಲಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ.