ಮಂಗಳೂರು: ಉಳ್ಳಾಲ ತಾಲೂಕಿನ ನರಿಂಗಾನ ನಿವಾಸಿ, ದಂತ ವೈದ್ಯಕೀಯ ಪದವಿ ಪೂರೈಸಿದ್ದ ಸ್ವಾತಿ ಶೆಟ್ಟಿ(24) ಮಂಗಳವಾರ ಬೆಳಗ್ಗೆ ಪಾಂಡೇಶ್ವರ ಪಿಜಿಯಲ್ಲಿ ಸಂಶಯಾಸ್ಪದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ.
ಎ.ಜೆ ಆಸ್ಪತ್ರೆಯಲ್ಲಿ ಬಿಡಿಎಸ್ ಪದವಿ ಪೂರೈಸಿದ್ದ ಸ್ವಾತಿ ಪಾಂಡೇಶ್ವರದ ಕ್ಲಿನಿಕ್ ಒಂದರಲ್ಲಿ ಎ. 16ರ ಮಂಗಳವಾರದಿಂದಲೇ ಕೆಲಸಕ್ಕೆ ಹಾಜರಾಗಬೇಕಿತ್ತು. ನಿನ್ನೆಯಷ್ಟೆ ತಾಯಿ ಜೊತೆಗೆ ಪಾಡೇಶ್ವರ ಕ್ಲಿನಿಕ್ ಗೆ ಬಂದು ಕೆಲಸದ ಬಗ್ಗೆ ಮಾತನಾಡಿ, ಅಲ್ಲಿನ ಪಿಜಿಯಲ್ಲಿ ಉಳಿದುಕೊಂಡಿದ್ದರು. ಪಾಂಡೇಶ್ವರ ಪೊಲೀಸ್ ಠಾಣೆ ಹಿಂಭಾಗದ ಪಿಜಿಯಲ್ಲಿ ಸೋಮವಾರ ಸಂಜೆಯಿಂದ ಉಳಿದಿದ್ದರು. ರಾತ್ರಿ ತಾಯಿ ಜತೆಗೆ ಮೋಬೈಲ್‌ನಲ್ಲಿ ಮಾತನಾಡಿದ್ದ ಯುವತಿ, ವಿಪರೀತ ತಲೆನೋವು ಎಂದು ಹೇಳಿದ್ದರು. ಬಳಿಕ ನಾಳೆ ಮಾತನಾಡುವುದಾಗಿ ಕಾಲ್ ಕಟ್ ಮಾಡಿದ್ದರು.
ಮಲಗಿದ್ದ ಸ್ವಾತಿಯ ದೇಹ ತಣ್ಣಗಾಗಿದ್ದನ್ನು ಕಂಡು ಇತರರು ಪಿಜಿಯ ಸೂಪರ್ ವೈಸರ್ ಗಮನಕ್ಕೆ ತಂದಿದ್ದಾರೆ.ತಕ್ಷಣ ಆಂಬ್ಯುಲೆನ್ಸ್ ತರಿಸಿ ವೆನ್‌ಲಾಕ್ ಗೆ ದಾಖಲಿಸಿದ್ದು ಅಲ್ಲಿ ಕೊನೆಯುಸಿರೆಳೆದಿದ್ದಾಗಿ ವೈದ್ಯೃು ತಿಳಿಸಿದ್ದರು. ಸ್ವಾತಿ ಶೆಟ್ಟಿಗೆ ಕೆಲಸ ಸಿಕ್ಕ ಕೂಡಲೇ ಪೋಷಕರು ಮದುವೆಗೆ ನಿರ್ಧರಿಸಿದ್ದರು. ಈ ಬಗ್ಗೆ ಪಾಂಡೇಶ್ವರ ಪೊಲೀಸರು ಕೇಳಿದಾಗ ಬಾಯಲ್ಲಿ ನೊರೆ ಬಂದಿತ್ತು ಎಂದು ಜೊತೆಗಿದ್ದವರು ತಿಳಿಸಿದ್ದರು. ಪಿಟ್ಸ್ ಕಾಯಿಲೆ ಇರುವ ಬಗ್ಗೆ ಮನೆಯವರು ಹೇಳಿದ್ದಾರೆ. ಆದರೆ ಸಹಜ ಸಾವು ಆಗಿರಬಹುದೆಂದು ತನಿಖೆಗಾಗಿ ದೂರು ಕೊಟ್ಟಿಲ್ಲ ಎಂದಿದ್ದಾರೆ.
ಸಾವಿನ ಬಗ್ಗೆ ಖಚಿತ ಮಾಹಿತಿ ಇನ್ನು ಸಿಕ್ಕಿಲ್ಲ , ಮಲಗಿದ್ದಲ್ಲೇ ಸಾವು ಕಂಡಿದ್ದರು ಎನ್ನುವುದಷ್ಟೆ ಮಾಹಿತಿಯಾಗಿದ್ದು ಸಣ್ಣ ವಯಸ್ಸಿನ ಆರೋಗ್ಯವಂತ ಯುವತಿ ಸಾವು ಅಚ್ಚರಿ ತಂದಿದೆ.