Site icon newsroomkannada.com

ಕಾಸರಗೋಡಿನ ಯುವತಿ ಕ್ರಿಕೆಟ್ ಲೋಕದ ‘ಸ್ಟಾರ್ ಆ್ಯಂಕರ್’ – ಇವರ ‘ಮಧು’ರ ಧ್ವನಿಗೆ ಕ್ರಿಕೆಟ್ ಪ್ರೇಮಿಗಳು ಫಿದಾ!

ಬೆಂಗಳೂರು: ಭಾರತದಲ್ಲಿ ಏಕದಿನ ವಿಶ್ವಕಪ್ ಕ್ರಿಕೆಟ್ ಹಬ್ಬ ಅಕ್ಟೋಬರ್‌ 5ರಿಂದ ಆರಂಭವಾಗಿದೆ. ವಿಶ್ವದ ಎಲ್ಲ ಕ್ರಿಕೆಟ್‌ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದ ಭಾರತ- ಪಾಕ್‌ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 7 ವಿಕೆಟ್‌ ಗಳ ಭರ್ಜರಿ ಜಯ ಪಡೆದಿದೆ. ಈ ಕುತೂಹಲ, ಕಾತುರದ ಕ್ರಿಕೆಟ್‌ ಹಬ್ಬದಲ್ಲಿ ಕರಾವಳಿಯ ಪ್ರತಿಭೆಯೊಬ್ಬರು ವಿಶ್ವಮಟ್ಟದಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಅವರೇ ಮಧು ಮೈಲಂಕೋಡಿ. ಕ್ರಿಕೆಟ್‌ ಸೇರಿದಂತೆ ಕ್ರೀಡಾ ನಿರೂಪಣೆ ಮನರಂಜನಾ ಕ್ಷೇತ್ರದ ನಿರೂಪಣೆಯಂತಲ್ಲ. ಅಲ್ಲಿ ವಿಷಯ ಅಧ್ಯಯನ, ನಿರೂಪರಣೆ ಪ್ರತಿಯೊಂದಕ್ಕೂ ಪೂರ್ವ ತಯಾರಿ ಅಗತ್ಯ. ಈ ನಿಟ್ಟಿನಲ್ಲಿ ಮಧು ಅವರ ಕ್ರೀಡಾ ಜ್ಞಾನ, ಭಾಷೆಯ ಮೇಲಿನ ಹಿಡಿತ, ವಿಷಯ ಪ್ರಸ್ತುತಿಯ ರೀತಿ ಎಲ್ಲರೂ ಮೆಚ್ಚುವಂತಿದ್ದು, ಅಂತಾರಾಷ್ಟ್ರಿಯ ಮಟ್ಟದಲ್ಲಿ ಸ್ಟಾರ್‌ ಆಂಕರ್‌ ಆಗಿ ಮಧು ಮೂಡಿಬಂದಿದ್ದಾರೆ. ಇಂತಹ ಕರಾವಳಿಯ ಪ್ರತಿಭೆ ಮಧು ಅವರ ಕುರಿತ ಸಣ್ಣ ವಿವರ ಇಲ್ಲಿದೆ.

ಮಧು ಎಲ್ಲಿಯವರು: ಮಧು ಮೈಲಂಕೋಡಿಯವರು ಕಾಸರಗೋಡು ಜಿಲ್ಲೆ ಬದಿಯಡ್ಕ ಪೇಟೆಯ ಪೆರ್ಡಾಲ ಎಂಬ ಗ್ರಾಮದಲ್ಲಿ ಸಾವಿತ್ರಿ ಜಿ ಭಟ್ ಮತ್ತು ಎಂ ಗಣಪತಿ ಭಟ್ ದಂಪತಿಯ ಎರಡನೇ ಪುತ್ರಿಯಾಗಿ ಜನಿಸಿದರು. ಮಂಗಳೂರು ಸೇಂಟ್ ಆಗ್ನೆಸ್ ಕಾಲೇಜು ಮತ್ತು ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಮಾಸ್‌ ಕಮ್ಯುನಿಕೇಷನ್‌ ನಲ್ಲಿ ಪದವಿ ಪೂರ್ಣ ಮಾಡಿದ್ದಾರೆ. ಇಂಗ್ಲಿಷ್, ಹಿಂದಿ, ಕನ್ನಡ, ಮಲಯಾಳಂ, ತುಳು, ಹವ್ಯಕ ಕನ್ನಡ ಸೇರಿದಂತೆ ಹಲವು ಭಾಷೆಗಳ ಮೇಲೆ ಪ್ರೌಢಿಮೆ ಹೊಂದಿದ್ದಾರೆ. ಮಂಗಳೂರಿನ ಸ್ಥಳೀಯ ಚಾನೆಲ್‌ ಗಳಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸಿದ್ದ ಅವರು ನಂತರ ಕಾರ್ಪೋರೇಟ್‌ ಕಾರ್ಯಕ್ರಮ ಹೋಸ್ಟ್‌ ಮಾಡಲು ತೊಡಗಿದರು. ಬಳಿಕ ಕೆಪಿಎಲ್‌ ಪಂದ್ಯಾವಳಿಯಲ್ಲಿ ಆಕೆ ಪಾಲ್ಗೊಂಡರು. ಪ್ರಸ್ತುತ ಅವರು ಸ್ಟಾರ್‌ ಸ್ಪೋರ್ಟ್‌ ಕನ್ನಡದ ಆಂಕರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಟನೆಯಲ್ಲಿಯೂ ಸೈ: ಮಧು ಅವರು ನಯನತಾರಾ ಅಭಿನಯದ ತಮಿಳು ಭಕ್ತಿ ಹಾಸ್ಯ ಚಲನಚಿತ್ರ ಮೂಕುತಿ ಅಮ್ಮನ್‌ನಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ. ತಮಿಳಿನ ಮೂಕುತಿ ಅಮ್ಮನ್‌ ಚಿತ್ರದ ಪಾತ್ರವೊಂದು ಅವರ ನಟನಾ ಪ್ರೌಢಿಮೆಯನ್ನು ಹೊರಜಗತ್ತಿಗೆ ಪರಿಚಯಿಸುವಲ್ಲಿ ಸಹಕಾರಿಯಾಯಿತು. ಮೂಕುತಿ ಅಮ್ಮನ್‌ ನಿರ್ದೇಶಕ ಬಾಲಾಜಿ ಅವರು ಸ್ಟಾರ್‌ ಸ್ಪೋರ್ಟ್‌ ನಲ್ಲಿಯೂ ಕೂಡ ಕೆಲಸ ಮಾಡಿದ್ದರು. ಇದೇ ಪರಿಚಯದಿಂದ ಅವರು ಈಚಿತ್ರದಲ್ಲಿ ಮಧು ನಟನಾ ಕ್ಷೇತ್ರದಲ್ಲಿಯೂ ಸೈ ಎನಿಸಿಕೊಳ್ಳುವಂತಾಯಿತು.

Exit mobile version