ಭೂಪಾಲ್: ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ವಿಶೇಷ ವಿವಾಹ ಕಾಯ್ದೆಯಡಿ ಟ್ರಾನ್ಸ್‌ಜೆಂಡರ್ ವ್ಯಕ್ತಿಯೊಬ್ಬರು ತಮ್ಮ ಬಹುಕಾಲದ ಗೆಳತಿಯನ್ನು ಕಾನೂನುಬದ್ಧವಾಗಿ ವಿವಾಹವಾದರು.
ಹೆಣ್ಣಾಗಿ ಹುಟ್ಟಿದ ಅಲ್ಕಾ ಸೋನಿ ಅಸ್ತಿತ್ವ ಎಂದು ಹೆಸರು ಬದಲಾಯಿಸಿಕೊಂಡು ಶಸ್ತ್ರಚಿಕಿತ್ಸೆ ಮಾಡಿಸಿ ಗಂಡಾಗಿ ಬದಲಾಗಿದ್ದಾರೆ. ಅಲ್ಕಾ ಸೋನಿ ದಿನಕಳೆದಂತೆ ತಾನು ಹುಡುಗಿಯಲ್ಲ ಹುಡುಗ ಎನ್ನುವ ಭಾವನೆಯಲ್ಲಿ ಬದುಕಲು ಶುರು ಮಾಡಿದ್ದಾರೆ. ಈ ವೇಳೆ ಅವರಿಗೆ ಆಸ್ತಾ ಎನ್ನುವ ಯುವತಿಯ ಪರಿಚಯವಾಗಿದೆ. ಪರಿಚಯ ದಿನಕಳೆದಂತೆ ವಿಶೇಷ ಬಾಂಧವ್ಯಕ್ಕೆ ತಿರುಗಿದೆ. ಪರಸ್ಪರ ಪ್ರೀತಿಸುವ ಮಟ್ಟಿಗೆ ಇಬ್ಬರ ಸ್ನೇಹ ಬೆಳೆದಿದೆ. ಆದರೆ ಅಲ್ಕಾಳಿಗೆ ಪುರುಷ ಹಾವ – ಭಾವದಲ್ಲೇ ಹೆಚ್ಚಿನ ಆಸಕ್ತಿ ಇತ್ತು. ಈ ಕಾರಣದಿಂದ ತನ್ನ 47ನೇ ಹುಟ್ಟುಹಬ್ಬದಂದು ಅಲ್ಕಾ ಲಿಂಗ ರೂಪಾಂತರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆ ಬಳಿಕ ತಮ್ಮ ಹೆಸರನ್ನು ಅಸ್ತಿತ್ವ ಎಂದು ಬದಲಾಯಿಸಿಕೊಂಡಿದ್ದಾರೆ.
ತಮ್ಮ ಮದುವೆಗೆ ಮುನ್ನ ತಮ್ಮ ಪರಿಸ್ಥಿತಿಯನ್ನು ವಿವರಿಸಿ ಇಂದೋರ್ ಡೆಪ್ಯೂಟಿ ಕಲೆಕ್ಟರ್ ರೋಶನ್ ರೈ ಅವರಿಗೆ ಅರ್ಜಿ ಸಲ್ಲಿಸಿದ್ದರು. ಜಿಲ್ಲಾಧಿಕಾರಿಗಳ ಪರಿಶೀಲನೆಯ ನಂತರ ಅವರ ಅರ್ಜಿಯನ್ನು ಸ್ವೀಕರಿಸಲಾಯಿತು. ಆ ಬಳಿಕ ಎರಡೂ ಕಡೆಯವರಿಗೆ ಸೂಚನೆ ನೀಡಲಾಯಿತು.
ಸದ್ಯ ಇಬ್ಬರು ಕೋರ್ಟ್ ಮ್ಯಾರೇಜ್ ಆಗಿದ್ದು, ಸೋಮವಾರ (ಡಿ.11 ರಂದು) ಎರಡೂ ಮನೆಯವರ ಸಮ್ಮುಖದಲ್ಲಿ ಮದುವೆ ಆಗಲಿದ್ದಾರೆ.