ಮಂಗಳೂರು: ಸೀರೆಯ ಸೆರಗು ಚಲಿಸುತ್ತಿದ್ದ ಸ್ಕೂಟಿಯ ಚಕ್ರದಡಿಗೆ ಸಿಲುಕಿ ಮಹಿಳೆಯೊಬ್ಬಳು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ರಾ.ಹೆ. 66ರ ಕಲ್ಲಾಪು ನಾಗನಕಟ್ಟೆಯ ಬಳಿ ಭಾನುವಾರ (ಸೆ.೨೫) ರಂದು ರಾತ್ರಿ ನಡೆದಿದೆ. ಮೃತರನ್ನು ಕಾಸರಗೋಡು ಜಿಲ್ಲೆಯ ಮಧೂರು, ಉಳಿಯ ನಿವಾಸಿ ಸುಮ ನಾರಾಯಣ ಗಟ್ಟಿ(51) ಎಂದು ಗುರುತಿಸಲಾಗಿದೆ.\
ದೊಡ್ಡಮ್ಮನ ಆರೋಗ್ಯ ವಿಚಾರಿಸಿ ಹಿಂತಿರುಗುತ್ತಿದ್ದ ವೇಳೆ ಕಲ್ಲಾಪು ಹೆದ್ದಾರಿಯಲ್ಲಿ ದುರ್ಘಟನೆ ಸಂಭವಿಸಿದೆ. ಸುಮ ಅವರು ನಿನ್ನೆ ಮಧ್ಯಾಹ್ನ ಸೋಮೇಶ್ವರ ಗ್ರಾಮದ ಪಿಲಾರು ಎಂಬಲ್ಲಿನ ಕುಟುಂಬದ ತರವಾಡು ಮನೆಯಲ್ಲಿ ವಾರ್ಷಿಕ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಯಂಕಾಲ ತಮ್ಮನ ಜೊತೆ ಸ್ಕೂಟರಿನಲ್ಲಿ ಜಪ್ಪಿನ ಮೊಗರುವಿಗೆ ತೆರಳಿ ಅಸೌಖ್ಯದಿಂದ ಬಳಲುತ್ತಿದ್ದ ದೊಡ್ಡಮ್ಮನ ಆರೋಗ್ಯ ವಿಚಾರಿಸಿ ಹಿಂತಿರುಗುತ್ತಿದ್ದರು.
ಸುಮ ಅವರ ಸೀರೆಯ ಸೆರಗು ಸ್ಕೂಟರಿನ ಚಕ್ರಕ್ಕೆ ಸಿಲುಕಿ ರಸ್ತೆಗೆಸೆಯಲ್ಪಟ್ಟಿರಬಹುದೆಂದು ಹೇಳಲಾಗುತ್ತಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೃತ ಸುಮ ಗಟ್ಟಿ ಅವರು ಮಧೂರಿನ ಗಟ್ಟಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ಕ್ರಿಯಾಶೀಲರಾಗಿದ್ದರು. ಮೃತರು ಪತಿ, ಎರಡು ಹೆಣ್ಣು ಒಂದು ಗಂಡು ಮಗುವನ್ನ ಅಗಲಿದ್ದಾರೆ.
ಸೀರೆಯ ಸೆರಗು ಸ್ಕೂಟಿಯ ಚಕ್ರದಡಿಗೆ ಸಿಲುಕಿ ಮಹಿಳೆ ದಾರುಣ ಸಾವು
