ನವದೆಹಲಿ: ನವದೆಹಲಿ: ಕೆನಡಾದಲ್ಲಿನ ಖಲಿಸ್ತಾನಿ ಉಗ್ರರಿಗೆ ಮಾತ್ರವಲ್ಲ, ಅಲ್ಲಿನ ರಾಜಕೀಯ ಪಕ್ಷಗಳ ಖಲಿಸ್ತಾನಿ ಬೆಂಬಲಿತ ಗುಂಪುಗಳಿಗೂ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಆರ್ಥಿಕ ಸಹಾಯ ಮಾಡುತ್ತಿದೆ ಎಂದು ಭಾರತೀಯ ಗುಪ್ತಚರ ಇಲಾಖೆ ಹೇಳಿದೆ. ಕೆನಡಾದ ಲಿಬರಲ್ ಪಾರ್ಟಿ ಮತ್ತು ನ್ಯೂ ಡೆಮಾಕ್ರಟಿಕ್ ಪಾರ್ಟಿಗಳಲ್ಲಿರುವ ಖಲಿಸ್ತಾನಿ ಗುಂಪುಗಳು ಪಾಕಿಸ್ತಾನದ ಗುಪ್ತಚರ ದಳ (ಐಎಸ್‌ಐ)ನಿಂದ ನಿಯಮಿತವಾಗಿ ಹಣ ಪಡೆದುಕೊಳ್ಳುತ್ತಿವೆ. ಹೀಗಾಗಿ ಪಾಕಿಸ್ತಾನದ ಕುಮ್ಮಕ್ಕಿನ ಮೇರೆಗೆ ಖಲಿಸ್ತಾನಿಗಳು ಭಾರತದ ವಿರುದ್ಧ ಸಮರ ಸಾರುತ್ತಿದ್ದಾರೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.
ಕೆನಡಾದಲ್ಲಿನ ಖಲಿಸ್ತಾನಿ ಗುಂಪುಗಳು ಅಲ್ಲಿನ ಸರ್ಕಾರದ ನಿಯಂತ್ರಣವನ್ನೇ ಮೀರಿದ್ದು, ಇತ್ತೀಚೆಗಷ್ಟೆ ಜಿ20 ಶೃಂಗಕ್ಕಾಗಿ ಭಾರತಕ್ಕೆ ಬಂದಿದ್ದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋಗೆ ಖಲಿಸ್ತಾನಿಗಳಿಂದ ಕೊಲೆ ಬೆದರಿಕೆ ಬಂದಿದೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಅಲ್ಲದೇ ವಲಸೆ ಹೆಸರಿನಲ್ಲಿ ಖಲಿಸ್ತಾನಿಗಳು ವಿದ್ಯಾರ್ಥಿಗಳಿಂದ ಹಣ ಪಡೆದುಕೊಳ್ಳುತ್ತಿದ್ದಾರೆ ಹಾಗೂ ಅದನ್ನು ಭಾರತ ವಿರೋಧಿ ಚಟುವಟಿಕೆಗಳಿಗೆ ಬಳಸುತ್ತಿದ್ದಾರೆ. ಭಾರತಕ್ಕೆ ಬಾರಲು ಇಷ್ಟವಿಲ್ಲದ ವಿದ್ಯಾರ್ಥಿಗಳನ್ನು ಖಲಿಸ್ತಾನಿ ಗುಂಪುಗಳು, ಭಾರತ ಮತ್ತು ಭಾರತದ ರಾಯಭಾರ ಕಚೇರಿ ವಿರುದ್ಧ ಪ್ರತಿಭಟನೆ ನಡೆಸಲು ಬಳಸಿಕೊಳ್ಳುತ್ತಿವೆ ಎಂದು ಮೂಲಗಳು ತಿಳಿಸಿವೆ.