main logo

ಕಡಲನಗರಿಯ “ಆಕಾಶ’ದೆತ್ತರದಲ್ಲೊಂದು “ಹೊಟೇಲ್‌’

ಕಡಲನಗರಿಯ “ಆಕಾಶ’ದೆತ್ತರದಲ್ಲೊಂದು “ಹೊಟೇಲ್‌’

ಮಂಗಳೂರು: ಭೂಮಿಯಿಂದ 120 ಅಡಿ ಎತ್ತರದಲ್ಲಿ ಕುಳಿತು ಕಡಲ ನಗರಿ ಮಂಗಳೂರನ್ನು ನೋಡುತ್ತಲೇ ಅಹಾರ ಸವಿಯಲು ಇಲ್ಲಿದೆ ಅವಕಾಶ!

ಕಡಲಲ್ಲಿ ತೇಲುವ ಹೋಟೆಲ್‌ ಗಳನ್ನು ಕಂಡಿದ್ದೇವೆ. ಕೆಲವೆಡೆ ತೂಗುವ ಹೋಟೆಲುಗಳೂ ಇವೆ. ಆದರೆ ಮಂಗಳೂರಿನಲ್ಲಿ ಆಕಾಶದೆತ್ತರದಲ್ಲಿ ಕುಳಿತು ಆಹಾರ ಸೇವಿಸಲು ಹೋಟೆಲ್‌ ಸಿದ್ಧವಾಗುತ್ತಿದೆ.

ರಾಜ್ಯದಲ್ಲಿ ಬೀಚ್‌ ಪ್ರವಾಸೋದ್ಯಮವನ್ನು ಇನ್ನಷ್ಟು ಆಕರ್ಷಣೀಯವಾಗಿಸಲು ಕರಾವಳಿ ತೀರದಲ್ಲೇ ಮೊದಲ ಬಾರಿಗೆ ಎಂಬಂತೆ “ಸ್ಕೈ ಡೈನಿಂಗ್‌’ ಪಣಂಬೂರು ಬೀಚ್‌ನಲ್ಲಿ ಆರಂಭವಾಗಲಿದೆ.

ಪಣಂಬೂರು ಬೀಚ್‌ನ ಅಭಿವೃದ್ಧಿಯ ಗುತ್ತಿಗೆ ಕಂಪೆನಿ “ಕದಳೀ ಬೀಚ್‌ ಟೂರಿಸಂ ಸಂಸ್ಥೆ’ ಈ ಯೋಜನೆಯನ್ನು ರೂಪಿಸಿದೆ. ಮೇ ಮೊದಲ ವಾರದಲ್ಲಿ ಸ್ಕೈ ಡೈನಿಂಗ್‌ ಕಾರ್ಯಾರಂಭಿಸುವ ಸಾಧ್ಯತೆ ಇದೆ. “ಸ್ಕೈ ಡೈನಿಂಗ್‌’ ವಿದೇಶದ ವಿವಿಧೆಡೆ ಪ್ರಸಿದ್ಧವಾಗಿದೆ. ಭಾರತದಲ್ಲೂ ಕೆಲವೆಡೆ ಈ ಪರಿಕಲ್ಪನೆ ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಮಂಗಳೂರಿನಲ್ಲೂ ಆರಂಭವಾದರೆ ಕರಾವಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ವಿಶೇಷ ಅನುಭವ ನೀಡಬಹುದು ಎಂದು ಅಂದಾಜಿಸಲಾಗಿದೆ.

 

120 ಅಡಿ ಎತ್ತರ

ಈಗಾಗಲೇ “ಸ್ಕೈ ಡೈನಿಂಗ್‌’ಗೆ ಸಂಬಂಧಿಸಿ ನಿರ್ಮಾಣ ಪ್ರಕ್ರಿಯೆ ಪ್ರಗತಿಯಲ್ಲಿದೆ. ಇದರ ಪ್ರಧಾನ ಅಂಗವಾಗಿರುವ ಕ್ರೇನ್‌ ರಚನೆ ಆರಂಭವಾಗಬೇಕಿದೆ. ಅಡುಗೆ ಮನೆಯೂ ನಿರ್ಮಾಣವಾಗಲಿದೆ. ಈ ಕ್ರೇನ್‌ 120 ಅಡಿಗಳಷ್ಟು ಎತ್ತರಕ್ಕೆ ಪ್ರವಾಸಿಗರನ್ನು ಕರೆದೊಯ್ಯಲಿದೆ. ಒಂದೆಡೆ ಸಮುದ್ರ- ಇನ್ನೊಂದೆಡೆ ಮಂಗಳೂರು ನಗರದ ವಿಹಂಗಮ ದೃಶ್ಯಗಳನ್ನು ಸವಿಯುತ್ತಾ ಆಹಾರ ಸವಿಯಲು ಅವಕಾಶವಿರಲಿದೆ. ಇಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿರ್ಮಿಸಲಾಗುತ್ತಿದೆ. ಸ್ಕೈ ಡೈನಿಂಗ್‌ ಜತೆಗೆ ಸಾಹಸ ಕ್ರೀಡೆ, ವಾಟರ್‌ ಸ್ಪೋರ್ಟ್ಸ್, ರೆಸ್ಟೋರೆಂಟ್‌ ಗಳಿಗೆ ಜಿಲ್ಲಾಡಳಿತ – ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಲಾಗಿದೆ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥರಾದ ಲಕ್ಷ್ಮೀಶ್‌ ಭಂಡಾರಿ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಪಣಂಬೂರು ಬೀಚ್‌ನಲ್ಲಿ ವಿವಿಧ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. “ಸ್ಕೈ ಡೈನಿಂಗ್‌’ ಕೂಡ ಹೊಸ ಪರಿಕಲ್ಪನೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಮಾಣಿಕ್ಯ

16 ಮಂದಿಗೆ ಅವಕಾಶ

-ಒಮ್ಮೆ 16 ಮಂದಿಗೆ ಸಂಗೀತದ ಜತೆಗೆ ತಿನಿಸು ಸವಿಯಲು ಅವಕಾಶ

-ಪ್ರತಿಯೊಬ್ಬರಿಗೂ ಸೇಫ್ಟಿ ಬೆಲ್ಟ್ ಅಳವಡಿಕೆ

-ಪರಿಚಾರಕರಿಗೆ, ತಾಂತ್ರಿಕ ಸಿಬಂದಿಗೆ ಪ್ರತ್ಯೇಕ ಕ್ಯಾಬಿನ್‌

-ಮೆನು ಆಧರಿಸಿ ಮೊದಲೇ ಆಹಾರ ಕಾದಿರಿಸಬಹುದು

-ಶೀಘ್ರವೇ ದರ ನಿಗದಿ

ಏನಿದು “ಸ್ಕೈ ಡೈನಿಂಗ್‌’?

ನೆಲಕ್ಕಿಂತ ಹಲವು ಅಡಿಗಳಷ್ಟು ಮೇಲ್ಭಾಗದಲ್ಲಿ ಕುಳಿತು ಊಟ ಸವಿಯುವುದು. ಇದೊಂದು ಸಾಹಸವೂ ಹೌದು. ಗಾಜಿನ ಮಾದರಿಯ ಪಾರದರ್ಶಕ ವಸ್ತು ಮತ್ತು ಕಬ್ಬಿಣದಿಂದ ರಚಿಸಲಾದ ಕ್ಯಾಬಿನ್‌ ಅನ್ನು ಕ್ರೇನ್‌ ಮೂಲಕ ಮೇಲಕ್ಕೆ ಎತ್ತಲಾಗುತ್ತದೆ. ಇದರಲ್ಲಿ ಟೇಬಲ್‌, ಚೇರ್‌ ಸಹಿತ ಎಲ್ಲ ವ್ಯವಸ್ಥೆ ಇರಲಿದೆ. ಸುತ್ತಲಿನ ವಿಹಂಗಮ ದೃಶ್ಯವನ್ನು ನೋಡುತ್ತ ಊಟ/ತಿಂಡಿ ಸವಿಯಬಹುದಾಗಿದೆ.

Related Articles

Leave a Reply

Your email address will not be published. Required fields are marked *

error: Content is protected !!