ಮುಲ್ಕಿ : ಜಿಲ್ಲೆಯ ಮೂಲ್ಕಿಯಲ್ಲಿರುವ ಪುರಾಣ ಪ್ರಸಿದ್ದ ಬಪ್ಪನಾಡು ದುರ್ಗಾಪರಮೇಶ್ವರಿ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವ ಮಾ. 31 ಸಂಪನ್ನಗೊಂಡಿದ್ದು, ಮಾ. 24 ರಿಂದ ನಡೆಯುತ್ತಿದ್ದ ವಿವಿಧ ಧಾರ್ಮಿಕ ವಿಧಿವಿಧಾನಗಳು ವಿಜೃಂಬಣೆಯಿಂದ ನೆರವೇರಿದೆ.
ಕೇರಳದ ಮುಸ್ಲಿಂ ವ್ಯಾಪಾರಿಯೋರ್ವ 800 ವರ್ಷಗಳ ಹಿಂದೆ ಕಟ್ಟಿದ ದೇಗುಲ ಎಂಬುವದು ಹಲವು ಕಡೆ ಉಲ್ಲೇಖವಾಗಿದೆ. ಕೇರಳ ಮೂಲದ ‘ಬಪ್ಪ’ ಎಂಬ ಮುಸಲ್ಮಾನ ವ್ಯಾಪಾರಿ ದೋಣಿ ದುರಂತದಲ್ಲಿ ತನ್ನವರನ್ನೆಲ್ಲ ಕಳೆದುಕೊಂಡು ಮೂಲ್ಕಿಗೆ ಬರುತ್ತಾರೆ. ಆಗ ಮೂಲ್ಕಿ ಸೀಮೆಯ ಅರಸರ ಬಳಿ ತನ್ನ ಕಷ್ಟವನ್ನೆಲ್ಲ ಹೇಳಿಕೊಂಡಾಗ ಅವರು ಇಲ್ಲೇ ಇರುವಂತೆ ಸೂಚಿಸುತ್ತಾರೆ. ದೋಣಿಯ ವ್ಯಾಪಾರಕ್ಕೆ ಹೊರಡಲು ಸಿದ್ಧವಾದ ಬಪ್ಪ ಬ್ಯಾರಿ ಇಲ್ಲಿನ ಶಾಂಭವಿ ನದಿಯಲ್ಲಿ ದೋಣಿ ಇಳಿಸುತ್ತಾರೆ. ಆಗ ಕಲ್ಲೊಂದಕ್ಕೆ ಬೋಟ್ ತಾಗಿ ರಕ್ತ ಸುರಿಯಲಾರಂಭಿಸುತ್ತದೆ. ಈ ವಿಚಾರವನ್ನು ವೈದಿಕ ಪಂಡಿತರ ಬಳಿ ಕೇಳಿ, ಜ್ಯೋತಿಷ್ಯ ಪ್ರಶ್ನೆಯನ್ನು ಇಟ್ಟಾಗ ಈ ಜಾಗದಲ್ಲಿ ದುರ್ಗಾಪರಮೇಶ್ವರಿ ನೆಲೆಸಿದ್ದಾಳೆ. ದೇವಿಯ ಆಶಯದಂತೆ ಬಪ್ಪ ಬ್ಯಾರಿ ದೇವಿಗೆ ದೇಗುಲ ಕಟ್ಟಿಕೊಡಬೇಕು ಎಂದು ಆಶಯ ವ್ಯಕ್ತಪಡಿಸಿದ ಕಾರಣ ದೇವಾಲಯದ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು ಎಂದು ಇತಿಹಾಸ ತಿಳಿಸುತ್ತದೆ.
ಮಾ.30ರಂದು ನಡೆದ ದುರ್ಗೆಯ ಶಯನೋತ್ಸವಕ್ಕೆ ಚೆಂಡು ಮಲ್ಲಿಗೆ ಸೇವೆ ನೀಡುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಂತಹ ಪದ್ದತಿ. ಅದರಂತೆ ಈ ಬಾರಿಯೂ ಲಕ್ಷಲಕ್ಷ ಮಲ್ಲಿಗೆ ಹೂವನ್ನು ಭಕ್ತರು ದುರ್ಗೆಗೆ ಅರ್ಪಿಸಿದ್ದಾರೆ. ಕಳೆದ ವರ್ಷದ ಜಾತ್ರೆಯ ವೇಳೆ ಅಂದಾಜು ಏಳು ಲಕ್ಷ ಚೆಂಡು ಮಲ್ಲಿಗೆ ಹರಿದು ಬಂದಿತ್ತು.
ಶಯನೋತ್ಸವಕ್ಕೆ ಮಲ್ಲಿಗೆ ಅರ್ಪಿಸಿದರೆ ಇಷ್ಟಾರ್ಥ ಈಡೇರಿಕೆ ಆಗುತ್ತೆ ಎನ್ನುವ ನಂಬಿಕೆ ಭಕ್ತರಲ್ಲಿ ಇರುವುದರಿಂದ, ತಮ್ಮಿಂದಾದಷ್ಟು ಮಲ್ಲಿಗೆ ಹೂವುಗಳನ್ನು ದುರ್ಗೆಗೆ ಸಮರ್ಪಿಸುತ್ತಾರೆ.
ಜಾತ್ರೆಯ ಕೊನೆಯ ದಿನ ಕವಾಟೋದ್ಘಾಟನೆ ಪೂಜಾವಿಧಾನ ಮುಗಿದ ಬಳಿಕ ಶಯನೋತ್ಸವಕ್ಕೆ ಬಂದ ಚೆಂಡು ಮಲ್ಲಿಗೆಯಲ್ಲಿ ಅರ್ಧ ಸೇವೆ ನೀಡಿದವರಿಗೆ, ಇನ್ನರ್ಧ ಭಕ್ತರಿಗೆ ಹಂಚಲಾಗುತ್ತದೆ. ಮಲ್ಲಿಗೆ ಹೂವನ್ನು ದೇವಾಲಯದ ಗರ್ಭಗುಡಿಯ ಸುತ್ತ ಕ್ರಮಬದ್ಧವಾಗಿ ಜೋಡಿಸಿ ಅಲಂಕರಿಸಲಾಗುತ್ತದೆ. ರಾತ್ರಿ ಪೂಜೆಯ ನಂತರ ದೇವಿಯು ಮಲ್ಲಿಗೆ ರಾಶಿಯಲ್ಲಿ ದುರ್ಗೆ ಮಲಗುತ್ತಾಳೆ ಎನ್ನುವ ಪ್ರತೀತಿ ಇದೆ.