ಉಳ್ಳಾಲ: ಕರಾವಳಿಯಲ್ಲಿ ಮತ್ತೆ ಮಳೆ ಅಬ್ಬರ ಹೆಚ್ಚಾಗಿದೆ. ಹೀಗಾಗಿ ಸೋಮೇಶ್ವರ ಉಚ್ಚಿಲದ ಎಂಡ್ ಪಾಯಿಂಟ್‌ನಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು, ಒಂದು ಮನೆ ಕುಸಿಯುವ ಭೀತಿಯಲ್ಲಿದ್ದು ಸುಮಾರು 10ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿದೆ.
ತಲಪಾಡಿ ಮತ್ತು ಉಚ್ಚಿಲ ಎಂಡ್ ಪಾಯಿಂಟ್ ಸಂಪರ್ಕಿಸುವ ಅಳಿವೆ ಬಾಗಿಲಿನಲ್ಲಿ ಕಳೆದ ಕೆಲವು ದಿನಗಳಿಂದ ಕಡಲ್ಕೊರೆತ ಹೆಚ್ಚಾಗಿದೆ. ತಲಪಾಡಿಯ ನದಿ ಬದಿಯಲ್ಲಿಯೂ ಕೊರೆತದಿಂದ ತಲಪಾಡಿ ವ್ಯಾಪ್ತಿಯ ಮನೆಗಳೂ ಅಪಾಯದಲ್ಲಿವೆ. ಇಲ್ಲಿನ ದಯಾವತಿ ಅವರ ಮನೆ ಕುಸಿಯುವ ಭೀತಿಯಲ್ಲಿದ್ದು, ಈ ಪ್ರದೇಶದಲ್ಲಿ ಈವರೆಗೂ ಯಾವುದೇ ತಾತ್ಕಾಲಿಕ ಕಾಮಗಾರಿ ನಡೆದಿಲ್ಲ.
ಕಳೆದ ಎರಡು ವರ್ಷಗಳಿಂದ ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಸಂಭವಿಸಿದ ಕಡಲ್ಕೊರೆತಕ್ಕೆ ರಸ್ತೆ ಸಂಪೂರ್ಣ ಸಮುದ್ರ ಪಾಲಾಗಿತ್ತು. ಇದೀಗ ಎಂಡ್ ಪಾಯಿಂಟ್ ಕಡೆಯೂ ರಸ್ತೆ ಕಡಲ್ಕೊರೆತದಿಂದ ಹಾನಿಯಾಗಿದ್ದು, ಇಲ್ಲಿರುವ ಮನೆಯೂ ಅಪಾಯದಲ್ಲಿದೆ.
ಎಂಡ್ ಪಾಯಿಂಟ್‌ನಲ್ಲಿ ಒಂದು ಭಾಗದಲ್ಲಿ ಸಮುದ್ರದ ಕೊರೆತ ಇದ್ದರೆ ಇನ್ನೊಂದು ಬದಿಯ ನದಿಯನ್ನು ಸಮುದ್ರ ಕಬಳಿಸುತ್ತಿದ್ದು, ಮನೆಗಳು ಅಪಾಯದಲ್ಲಿವೆ. ನದಿಯಾಚೆ ತಲಪಾಡಿ ಪ್ರದೇಶದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿದ್ದು, ಜನರು ಆತಂಕದಲ್ಲಿದ್ದಾರೆ.
ಕಡಲ್ಕೊರೆತಕ್ಕೆ ಜಿಲ್ಲಾಡಳಿತ ಸ್ಪಂದಿಸದ ಹಿನ್ನೆಲೆಯಲ್ಲಿ ಸ್ಥಳೀಯರು ಸಮುದ್ರ ಕೊರೆತ ಹೆಚ್ಚಾಗದಂತೆ ಜೆಸಿಬಿ ಮೂಲಕ ತಡೆ ಕಾರ್ಯ ನಡೆಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಸ್ಥಳೀಯರು ಶ್ರಮದಾನದ ಮೂಲಕ ಮರಳು ಚೀಲ ಪೇರಿಸುವ ಕಾರ್ಯ ಆರಂಭಿಸಿದ್ದಾರೆ