ಕುಂದಾಪುರ: ಮನೆಯಿಂದ ಹೊರಹೋಗಿ ಕಾಡಿನಲ್ಲಿ ನಾಪತ್ತೆಯಾಗಿದ್ದ ಯುವಕನೊಬ್ಬ ಕಾಡಿನ ದಾರಿಯಲ್ಲಿ ಹಾದಿ ತಪ್ಪಿ ಎಂಟು ದಿನಗಳ ನಿರಂತರ ಅಲೆದಾಟದ ಬಳಿಕ ಮನೆ ಸೇರಿರುವ ವಿಸ್ಮಯಕಾರಿ ಘಟನೆ ಮತ್ತು ಈ ಮಾನಸಿಕ ಅಸ್ವಸ್ಥ ಯುವಕನನ್ನು ಕಾಡಿನಿಂದ ಮರಳಿ ಮನೆ ಸೇರಿಸಿದ ಸಾಕು ನಾಯಿಯ ಸಾಹಸವೊಂದು ಇದೀಗ ಉಡುಪಿ ಜಿಲ್ಲೆಯಾದ್ಯಂತ ‘ಟಾಕ್ ಆಫ್ ದಿ ಟೌನ್ ಆಗಿದೆ.
ಮುಳ್ಳುಗುಡ್ಡೆ ಕೊರಗಜ್ಜನಿಗೆ ಹೇಳಿಕೊಂಡ ಹರಕೆ ಮತ್ತು ಆ ಯುವಕನ ಜೊತೆ ಕಾಡಿಗೆ ತೆರಳಿದ್ದ ನಾಯಿಯ ಸಾಹಸದಿಂದ ಯುವಕ ಎಂಟು ದಿನಗಳ ಕಾನನ ಅಲೆದಾಟದ ಬಳಿಕವೂ ಸುರಕ್ಷಿತವಾಗಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಮನೆ ತಲುಪುವಂತಾಗಿದೆ.
ಉಡುಪಿ ಜಿಲ್ಲೆಯ ಅಮಾವಾಸ್ಯೆ ಬೈಲಿನಲ್ಲಿ ಈ ಅಚ್ಚರಿಯ ಘಟನೆ ನಡೆದಿದ್ದು, ಮಟ್ಟಟ್ಟು ಗ್ರಾಮದ ತೊಂಬಟ್ಟು ಇರ್ಕಿಗದ್ದೆ ನಿವಾಸಿ ಶೀನ ನಾಯ್ಕ ಅವರ ಮಗ ವಿವೇಕಾನಂದ (28) ಎಂಬಾತ ಸೆ.16ರಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ.
ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಈ ಯುವಕ ತನ್ನ ಮನೆಯಿಂದ ಹೊರಡುವ ಸಂದರ್ಭದಲ್ಲಿ ಮನೆಯ ನಾಯಿ ಕೂಡು ಆತನ ಜೊತೆ ತೆರಳಿತ್ತು. ಇತ್ತ ಕಾಡಿನಲ್ಲಿ ದಾರಿ ತಪ್ಪಿ ವಾರಗಳ ಅಲೆದಾಡಿದ್ದ ವಿವೇಕಾನಂದ ಸರಿಯಾದ ಆಹಾರವಿಲ್ಲದೆ ಬರೀ ನೀರು ಕುಡಿದು ಜೀವ ಉಳಿಸಿಕೊಂಡಿದ್ದ.
ಊರಿಗೆ ಮರಳುವ ದಾರಿ ಕಾಣದೇ ಕಾಡಿನಲ್ಲೇ ಸತ್ತಾಡುತ್ತಾ ನಿತ್ರಾಣಗೊಂಡಿದ್ದ ವಿವೇಕಾನಂದ ಆಶ್ಚರ್ಯಕರ ರೀತಿಯಲ್ಲಿ ಎಂಟು ದಿನಗಳ ಬಳಿಕ ಕಬ್ಬಿನಾಲೆ ಸಮೀಪದ ಮನೆ ಒಂದರ ಬಳಿ ನಿತ್ರಾಣಗೊಂಡ ಸ್ಥಿತಿಯಲ್ಲಿ ಪತ್ತೆಯಾಗುತ್ತಾನೆ.
ಅಷ್ಟೂ ದಿನಗಳ ಕಾಲ ಯುವಕನ ಜೊತೆಯಲ್ಲೇ ಕಾಡಿನಲ್ಲಿ ಸುತ್ತಾಡುತ್ತಿದ್ದ ಅವರ ಮನೆ ನಾಯಿಯೇ ಯುವಕನಿಗೆ ಕೊನೆಗೂ ಕಾಡಿನಿಂದ ನಾಡಿನ ದಾರಿ ತೋರಿಸುವಲ್ಲಿ ಸಹಾಯ ಮಾಡಿದೆ ಎಂಬುದಾಗಿ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದು, ಈ ನಾಯಿಯ ಸಾಹಸಕ್ಕೆ ಗ್ರಾಮಸ್ಥರಿಂದ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಎಂಟು ದಿನಗಳ ಅಲೆದಾಟದ ಬಳಿಕ ಕಾಡಿನಿಂದ ಸುರಕ್ಷಿತವಾಗಿ ನಾಡಿಗೆ ವಾಪಾಸಾದ ಯುವಕ ಮತ್ತು ಆತನಿಗೆ ಊರಿನ ದಾರಿ ತೋರಿಸಿದೆ ಎನ್ನಲಾದ ಸಾಕು ನಾಯಿಯನ್ನು ಊರವರು ಮೆರವಣಿಗೆ ಮಾಡಿದ್ದಾರೆ ಮತ್ತು ತಮ್ಮ ಮನೆ ಮಗ ಜೀವಂತವಾಗಿ ವಾಪಾಸು ಬಂದ ಖುಷಿಗೆ ಶೀನ ನಾಯ್ಕರ ಕುಟುಂಬ ಸಿಹಿಯೂಟವನ್ನೂ ಹಾಕಿಸಿದ್ದು ಒಟ್ಟಿನಲ್ಲಿ ಈ ಘಟನೆ ಮಚ್ಚೆಟ್ಟು ಭಾಗದಲ್ಲಿ ಸಂಭ್ರಮದ ವಾತಾವರಣಕ್ಕೆ ಕಾರಣವಾಗಿತ್ತು.