main logo

ASIA CUP FINAL: ‘ಸ್ಟೇಡಿಯಂ ಕೆಲಸಗಾರರೇ’ ‘Men of the Match’–ಸಿರಾಜ್ ‘ರಿಯಲ್ ಹೀರೋ’!

ASIA CUP FINAL: ‘ಸ್ಟೇಡಿಯಂ ಕೆಲಸಗಾರರೇ’ ‘Men of the Match’–ಸಿರಾಜ್ ‘ರಿಯಲ್ ಹೀರೋ’!

ಕೊಲಂಬೋ: ಏಷ್ಯಾ ಕಪ್ (Asia Cup) ಫೈನಲ್ ಪಂದ್ಯದಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿ ಟಿಂ ಇಂಡಿಯಾ (Team India)  ಏಷ್ಯಾಕಪ್ ಚಾಂಪಿಯನ್ ಆಗುವಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಸೀಮರ್ ಮುಹಮ್ಮದ್ ಸಿರಾಜ್ (Mohammed Siraj) ತನ್ನ ಹೃದಯ ವೈಶಾಲ್ಯದಿಂದ ಸುದ್ದಿಯಾಗಿದ್ದಾರೆ.

ಫೈನಲ್ ಪಂದ್ಯದಲ್ಲಿ 6 ವಿಕೆಟ್ ಕಿತ್ತು ಶ್ರೀಲಂಕಾ (Sri Lanka) ಜುಜುಬಿ 50 ರನ್ ಗಳಿಗೆ ಆಲೌಟ್ ಆಗುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಸಿರಾಜ್ ಅವರ ಈ ಸಾಹಸಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ (Man of the Match) ಪ್ರಶಸ್ತಿ ಒಲಿದುಬಂದಿತ್ತು.

ತನಗೆ ಸಿಕ್ಕಿದ 5 ಸಾವಿರ ಡಾಲರ್ (4.16 ಲಕ್ಷ ರೂಪಾಯಿಗಳು) ಬಹುಮಾನದ ಮೊತ್ತವನ್ನು ಪ್ರೇಮದಸಾಸ ಕ್ರೀಡಾಂಗಣದ ಸ್ಟೇಡಿಯಂ ಕೆಲಸಗಾರರಿಗೆ ನೀಡಿ ಔದಾರ್ಯ ಮೆರೆದಿದ್ದಾರೆ.

‘ಅವರಿಲ್ಲದೇ ಇರ್ತಿದ್ರೆ ಈ ಮ್ಯಾಚೇ ನಡೀತಿರ್ಲಿಲ್ಲ..ಈ ಕ್ಯಾಶ್ ಪ್ರೈಝ್ ಅವರಿಗಾಗಿ’ ಎಂದು ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಸ್ವೀಕರಿಸುವ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಮಹಮ್ಮದ್ ಸಿರಾಜ್, ತನಗೆ ಸಿಕ್ಕಿದ ಬಹುಮಾನದ ಮೊತ್ತವನ್ನು ಮೈದಾನ ಕೆಲಸಗಾರರಿಗೆ ಅರ್ಪಿಸಿದರು.

ಮಳೆಯ ಕಾರಣದಿಂದ ಏಷ್ಯಾ ಕಪ್ ಫೈನಲ್ ನಡೆಯುವುದೇ ಅನುಮಾನವಾಗಿತ್ತು. ಭಾನುವಾರ ಬೆಳಿಗ್ಗೆ ಭಾರೀ ಮಳೆಯಾಗಿದ್ದಲ್ಲದೆ, ಸಾಯಂಕಾಲವೂ ಭಾರೀ ಮಳೆ ಸುರಿಯುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ಆದರೆ ಮಧ್ಯಾಹ್ನ ನಂತರ ಮಳೆರಾಯ ವಿರಾಮ ನೀಡಿದ್ದರಿಂದ ಭಾರತ-ಶ್ರೀಲಂಕಾ ನಡುವೆ ಫೈನಲ್ ಪಂದ್ಯಾಟ ನಡೆಯಿತು. ಈ ನಡುವೆ ಬೆಳಿಗ್ಗೆ ಭಾರೀ ಮಳೆಯಾಗಿದ್ದರೂ ಮೈದಾನದಲ್ಲಿ ನೀರು ನಿಲ್ಲದಂತೆ ಕವರ್ ಮಾಡಿದ್ದ ಕೆಲಸಗಾರರು ಆಟಕ್ಕೆ ಅಡ್ಡಿಯಾಗದಂತೆ ನೋಡಿಕೊಂಡಿದ್ದರು.

ಹಾಗಾಗಿ ಫೈನಲ್ ಪಂದ್ಯಾಟ ಯಾವುದೇ ಅಡ್ಡಿಯಿಲ್ಲದೆ ನಡೆದಿದ್ದರೆ, ಅದರ ಸಂಪೂರ್ಣ ಶ್ರೇಯಸ್ಸು ಇಲ್ಲಿನ ಗ್ರೌಂಡ್ ಮೆನ್ ಗಳಿಗೆ ಸಲ್ಲುತ್ತದೆ.

ಇದನ್ನು ಪರಿಗಣಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಸಿರಾಜ್ ಅವರು ‘ಪಂದ್ಯಶ್ರೇಷ್ಠ’ ಪ್ರಶಸ್ತಿಯ ಶ್ರೇಯಸ್ಸನ್ನು ಇಲ್ಲಿನ ಮೈದಾನದ ಕೆಲಸಗಾರರಿಗೆ ಅರ್ಪಿಸಿದ್ದಾರೆ.


ತನ್ನ ಜೀವನ ಶ್ರೇಷ್ಠ ಬೌಲಿಂಗ್ ಮೂಲಕ 6 ವಿಕೆಟ್ ಕಿತ್ತು ಲಂಕಾ ಬ್ಯಾಟಿಂಗ್ ಬೆನ್ನೆಲುಬು ಮುರಿದಿದ್ದ ಸಿರಾಜ್ ಬೌಲಿಂಗ್ ಲಂಕಾ ಬ್ಯಾಟ್ಸ್ ಮನ್ ಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ಲಂಕಾ 15.2 ಓವರ್ ಗಳಲ್ಲಿ 50 ರನ್ ಗಳಿಗೆ ಆಲೌಟ್ ಆಗಿತ್ತು. ಕೇವಲ 6.1 ಓವರ್ ಗಳಲ್ಲಿ ಈ ಅಲ್ಪ ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ ಹತ್ತು ವಿಕೆಟ್ ಗಳ ಭರ್ಜರಿ ಜಯವನ್ನು ತನ್ನದಾಗಿಸಿಕೊಂಡಿತ್ತು.

Related Articles

Leave a Reply

Your email address will not be published. Required fields are marked *

error: Content is protected !!