ಬೆಳವಂಗಲ: ರಾತ್ರಿ ಊಟ ಮಾಡಿ ಮಲಗಿದ್ದವರು ಮನೆಯಿಂದ ಹೊರಬಂದಿಲ್ಲ ಕೋಳಿ ಫಾರಂ ನಲ್ಲಿ ಮಲಗಿದ್ದ ನಾಲ್ವರು ಅನುಮಾನಾಸ್ಪದವಾಗಿ ಅಂತ್ಯ ಕಂಡಿದ್ದಾರೆ. ಮನೆಯ ಬಾಗಿಲನ್ನು ತೆಗೆದುನೋಡಿದಾಗ ಮನೆಯಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಒಂದೇ ಕುಟುಂಬದ ನಾಲ್ವರು ಕೊನೆಯುಸಿರೆಳೆದಿರುವುದು ಇಂದು (ಸೆ.17) ಬೆಳಕಿಗೆ ಬಂದಿದೆ.
ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಸಮೀಪದ ಹೊಲೆಯರಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಕಳೆದ 8 ದಿನಗಳ ಹಿಂದೆ ಕೆಲಸಕ್ಕಾಗಿ ಕೋಳಿ ಫಾರಂಗೆ ಕುಟುಂಬ ಸಮೇತರಾಗಿ ಆಗಮಿಸಿ, ಇಲ್ಲಿ ನೆಲೆಗೊಂಡಿದ್ದರು ಎನ್ನಲಾಗಿದೆ.
ಆದರೆ, 10 ದಿನ ಕಳೆಯುವಷ್ಟರಲ್ಲಿಯೇ ಇಡೀ ಕುಟುಂಬದಲ್ಲಿ ಒಬ್ಬರೇ ಒಬ್ಬ ಸದಸ್ಯರೂ ಉಳಿಯದಂತೆ ದುರಂತ ಅಂತ್ಯವಾಗಿದ್ದಾರೆ.
ಒಂದೇ ಕುಟುಂಬದ ಸದಸ್ಯರಾದ ಕಾಲೇ ಸರೇರಾ (60), ಲಕ್ಷ್ಮಿ ಸರೇರಾ (50), ಉಷಾ ಸರೇರಾ (40) ಹಾಗೂ ಪೂಲ್ ಸರೇರಾ(16) ಕೊನೆಯುಸಿರೆಳೆದವರು ಎಂದು ಗುರುತಿಸಲಾಗಿದೆ. ಇವರು ನೇಪಾಳ ಮೂಲದ ಕುಟುಂಬದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಇಡೀ ಕುಟುಂಬದ ಅಂತ್ಯಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ದೊಡ್ಡಬೆಳವಂಗಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಾಹಿತಿ ಲಭ್ಯವಾದ ಕೂಡಲೇ ಸ್ಥಳಕ್ಕೆ ದೊಡ್ಡಬೆಳವಂಗಲ ಪೋಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ದೊಡ್ಡಬಳ್ಳಾಪುರ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ವರದಿ ತಿಳಿಸಿದೆ.