ಪುತ್ತೂರು: ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ (ರಿ.) ಅರ್ಪಿಸುವ ‘ಚೆಂಬರ್ ಕನ್ಸರ್ಟ್’ (Chamber Concert) ಅಥವಾ ‘ಗೃಹ ಮಾಲಿಕೆ’ ಪರಿಕಲ್ಪನೆಯಲ್ಲಿ ಮೂಡಿ ಬಂದಿರುವ ಭರತನಾಟ್ಯ (Bharatanatyam) ಪ್ರದರ್ಶನ ಕಾರ್ಯಕ್ರಮ ‘ನೃತ್ಯಾಂತರಂಗ’ ಸರಣಿಯ 104ನೇ ಕಾರ್ಯಕ್ರಮ ಇಂದು (ಸೆ.16) ನಡೆಯಲಿದೆ.
ನೃತ್ಯ ಗುರುಗಳಾಗಿರುವ ವಿದ್ವಾನ್ ದೀಪಕ್ ಪುತ್ತೂರು (Deepak Puttur) ಅವರ ಪರಿಕಲ್ಪನೆಯಾಗಿರುವ ಈ ನೃತ್ಯಾಂತರಂಗ ಸರಣಿ ಕಾರ್ಯಕ್ರಮ ಇದೀಗ ಶತ ಪ್ರದರ್ಶನಗಳನ್ನು ಪೂರೈಸಿ 104ನೇ ಪ್ರದರ್ಶನಕ್ಕೆ ಅಡಿಯಿಡುತ್ತಿದೆ.
ಈ 104ನೇ ನೃತ್ಯಾಂತರಂಗದಲ್ಲಿ, ಗುರು ಶ್ರೀಮತಿ ಪ್ರತಿಮಾ ಶ್ರೀಧರ್ (Prathima Shridhar) ಮತ್ತು ಶ್ರೀಧರ್ ಹೊಳ್ಳ (Shridhar Holla) ಅವರ ಶಿಷ್ಯೆಯಾಗಿರುವ ವಿದುಷಿ ಅನ್ನಪೂರ್ಣ ರಿತೇಶ್ (Vidhushi Annapoorna Ritesh) ಅವರು ತಮ್ಮ ನಾಟ್ಯ ಪ್ರತಿಭೆಯನ್ನು ನೃತ್ಯಾಸಕ್ತರ ಸಮ್ಮುಖದಲ್ಲಿ ಅನಾವರಣಗೊಳಿಸಲಿದ್ದಾರೆ.
ದರ್ಬೆಯಲ್ಲಿರುವ (Darbe) ಶಶಿಶಂಕರ ಸಭಾಂಗಣದಲ್ಲಿ (ShashiShankara Hall) ಇಂದು (ಸೆ.16) ಸಾಯಂಕಾಲ 6.00 ಗಂಟೆಗೆ ಸರಿಯಾಗಿ ‘ನೃತ್ಯಾಂತರಂಗ’ ಪ್ರಾರಂಭಗೊಳ್ಳಲಿದೆ.
ಪತ್ರಕರ್ತ ಹರಿಪ್ರಸಾದ್ ನೆಲ್ಯಾಡಿ (Hariprasad Nellyadi) ಈ ಕಾರ್ಯಕ್ರಮದ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ.
ಈಗಾಗಲೇ, ‘ಗೃಹ ಮಾಲಿಕೆ’ ಪರಿಕಲ್ಪನೆಯಲ್ಲಿ ಪ್ರತೀ ತಿಂಗಳು ನಡೆಯುತ್ತಿರುವ ಈ ‘ನೃತ್ಯಾಂತರಂಗ’ ಕಾರ್ಯಕ್ರಮ ಇದೀಗ ಶತಕದ ಗಡಿಯನ್ನು ದಾಟಿ 103 ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿರುವುದು ಪುತ್ತೂರು ಮಾತ್ರವಲ್ಲದೇ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ಒಂದು ಹೆಗ್ಗಳಿಕೆಯೇ ಸರಿ.
ಈ ‘ನೃತ್ಯಾಂತರಂಗ’ದ 103 ಕಾರ್ಯಕ್ರಮಗಳಲ್ಲಿ, ರಾಜ್ಯ ಮತ್ತು ದೇಶ-ವಿದೇಶಗಳಲ್ಲೂ ಹೆಸರುವಾಸಿಯಾಗಿರುವ ಭರತನಾಟ್ಯ ಕಲಾವಿದರು ತಮ್ಮ ಕಲಾ ಪ್ರದರ್ಶನವನ್ನು ನೀಡಿರುವುದು ‘ನೃತ್ಯಾಂತರಂಗ’ದ ಹೆಗ್ಗಳಿಕೆಯಾಗಿದೆ.
ಕಲೆಯೊಂದು ನಿರಂತರವಾಗಿ ಜನರನ್ನು ತಲುಪುತ್ತಿರಬೇಕು ಮತ್ತು ಅದು ಕೇವಲ ಮನೋರಂಜನೆ ನೀಡುವುದು ಮಾತ್ರವಲ್ಲದೇ ಮಾಹಿತಿಪೂರ್ಣವಾಗಿಯೂ ಮೂಡಿಬಂದು ಕಲೆಯ ಸಂಪೂರ್ಣ ರಸಾನುಭವ ಪ್ರೇಕ್ಷಕರಿಗೆ ಸಿಗಬೇಕೆಂಬ ಸದುದ್ದೇಶದಿಂದ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿ ಪ್ರಾರಂಭಿಸಿದ ‘ಗೃಹ ಮಾಲಿಕೆ’ ಕಾರ್ಯಕ್ರಮವೇ ‘ನೃತ್ಯಾಂತರಂಗ’ವಾಗಿದೆ.
ಭಾರತದ ಮೇರು ಕಲೆಯಾಗಿರುವ ಭರತನಾಟ್ಯ ಕ್ಷೇತ್ರದಲ್ಲಿ ಜಿಲ್ಲೆಯಲ್ಲೇ ಮಾದರಿಯಾಗಿರುವ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ರೂವಾರಿಯಾಗಿರುವ ವಿದ್ವಾನ್ ದೀಪಕ್ ಕುಮಾರ್ ಸಹೃದಯ ಪ್ರೇಕ್ಷಕರಲ್ಲಿ ಮತ್ತು ಕಲಾ ಪೋಷಕರಲ್ಲಿ ವಿನಂತಿಸಿಕೊಂಡಿದ್ದಾರೆ.