ಮಂಗಳೂರು: ವಿಘ್ನವಿನಾಶಕ ಗಣೇಶ ಹಬ್ಬ ಆಚರಣೆ ದಿನಾಂಕಕ್ಕೆ ಸಂಬಂಧಿಸಿದಂತೆ ಕರಾವಳಿ ಭಾಗದಲ್ಲಿ ಎದ್ದಿದ್ದ ಗೊಂದಲಗಳಿಗೆ ತೆರೆ ಎಳೆಯಲು ರಾಜ್ಯ ಸರಕಾರ ನಿರ್ಧರಿಸಿದಂತಿದೆ.
ರಾಜ್ಯ ಸರಕಾರದ ರಜಾ ಕ್ಯಾಲೆಂಡರ್ ಪಟ್ಟಿಯಲ್ಲಿ ಚೌತಿ ಹಬ್ಬಕ್ಕೆ ಸೆ.18ರಂದು ಸಾರ್ವತ್ರಿಕ ರಜೆ ಘೋಷಣೆಯಾಗಿತ್ತು.
ಆದರೆ ಕರಾವಳಿ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಚೌತಿ ಆಚರಣೆ ಸೆ.19ರಂದು ಬರುತ್ತದೆ. ಈ ನಿಟ್ಟಿನಲ್ಲಿ ಸಾರ್ವತ್ರಿಕ ರಜಾ ದಿನಾಂಕವನ್ನು ಬದಲಿಸಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಮತ್ತು ಹಿಂದು ಸಂಘಟನೆ ಹಾಗೂ ಬಿಜೆಪಿ ಮುಖಂಡರಿಂದ ಕೇಳಿಬಂದಿತ್ತು.
ಈ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚೌತಿ ಆಚರಣೆಗೆ ಸೆ.19ರ ಮಂಗಳವಾರ ರಜೆ ನೀಡುವಂತೆ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಿದ್ದರು.
ಇದೀಗ ಪ್ರತಾಪ್ ಸಿಂಹ ನಾಯಕ್ ಅವರ ಮನವಿಗೆ ಪೂರಕವಾಗಿ ಸ್ಪಂದಿಸಿರುವ ಸಚಿವ ದಿನೇಶ್ ಗುಂಡೂರಾವ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ರಜೆಯನ್ನು ಸೆ.18ರ ಬದಲಿಗೆ ಸೆ.19ಕ್ಕೆ ನೀಡುವಂತೆ ಜಿಲ್ಲಾಧಿಕಾರಿಯವರಿಗೆ ಸೂಚನೆ ನೀಡಿದ್ದಾರೆ.
ದಕ್ಷಿಣ ಕನ್ನಡ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಗಣೇಶ್ ಚತುರ್ಥಿಯ ಸೆ.18ರ ಸಾರ್ವತ್ರಿಕ ರಜೆಯಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆಯಾಗಿಲ್ಲ.