ಹುಬ್ಬಳ್ಳಿ: ರಾಜಕಾರಣ, ಮಳೆ-ಬೆಳೆ, ಪ್ರಾಕೃತಿಕ ವಿಕೋಪ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ತನ್ನ ನಿಖರ ಭವಿಷ್ಯವಾಣಿಯ ಮೂಲಕ ಹೆಸರುವಾಸಿಯಾಗಿರುವ ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿಯವರು ಇದೀಗ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದ ಬಗ್ಗೆ ನುಡಿದಿರುವ ಭವಿಷ್ಯವಾಣಿಯೊಂದು ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿದೆ.
‘ಯುಗಾದಿ ಹಬ್ಬದವರೆಗೂ ಸಮಯವಿದ್ದು, ಆಮೇಲೆ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಏನಾಗಲಿದೆ ಎಂಬುದು ನಿಮಗೇ ತಿಳಿಯಲಿದೆ..’ ಎಂದು ಕೋಡಿಮಠ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
‘ಮನುಷ್ಯ ಮಾಡಿದ ತಪ್ಪನ್ನು ದೇವರು ಕ್ಷಮಿಸುತ್ತಾನೆ, ಆದರೆ ಮನುಷ್ಯ ಮಾಡಿದ ಪಾಪ ಕರ್ಮಗಳು ಮನುಷ್ಯನನ್ನು ಕ್ಷಮಿಸುವುದಿಲ್ಲ. ಮನುಷ್ಯನ ಪಾಪ ಕರ್ಮಗಳೇ ಇಂತಹ ಪರಿಸ್ಥಿತಿಗೆ ಕಾರಣವಾಗಿದ್ದು, ಆತನ ಕರ್ಮಬಾಧೆಗಳು ಹೆಚ್ಚಾದಾಗ ಇಂತಹ ಪರಿಸ್ಥಿತಿಗಳನ್ನು ಸಾಮೂಹಿಕವಾಗಿ ಎದುರಿಸಬೇಕಾಗುತ್ತದೆ..’ ಎಂದು ಅವರು ಹೇಳಿದ್ದಾರೆ.
‘ಶ್ರಾವಣದ ಮಧ್ಯಭಾಗದಲ್ಲಿ ಮಳೆಯಾಗುತ್ತಿದೆ, ಈ ಅಮವಾಸ್ಯೆ ಕಳೆದ ಬಳಿಕ ರಾಜ್ಯದಲ್ಲಿ ಮಳೆ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ..’ ಎಂದು ಅವರು ಮಳೆ ಮುನ್ಸೂಚನೆಯನ್ನು ನೀಡಿದರು.
ಬಿಜೆಪಿ – ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಲು ಶ್ರೀಗಳು ನಿರಾಕರಿಸಿದರು. ಆದರೆ, ‘ದೊಡ್ಡ ನಗರಗಳಿಗೆ ಆಪತ್ತು ಕಾದಿದೆ ಹಾಗೂ ರಾಜಕೀಯ ವ್ಯವಸ್ಥೆಯಲ್ಲಿ ಅಸ್ಥಿರತೆ ಉಂಟಾಗಲಿದೆ,,’ ಎಂದು ತಾನು ಈ ಹಿಂದೆ ನುಡಿದಿದ್ದ ಮಾತುಗಳನ್ನು ಶ್ರೀಗಳು ಪುನರುಚ್ಚರಿಸಿದರು.
ಉದಯನಿಧಿ ಸ್ಟಾಲಿನ್ ಅವರ ಸನಾತನ ಧರ್ಮದ ವಿಚಾರದಲ್ಲಿ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, ‘ಧರ್ಮದ ವಿಚಾರದಲ್ಲಿ ರಾಜಕೀಯ ಬೆರೆಸುವುದು ಸೂಕ್ತವಲ್ಲ’ ಎಂದಷ್ಟೇ ಅಭಿಪ್ರಾಯಪಟ್ಟಿದ್ದಾರೆ.