ನವದೆಹಲಿ: ಇಂಡಿಯಾ (India) ಎನ್ನುವ ಹೆಸರು ಭಾರತ (Bharat) ಎಂದು ಅಧಿಕೃತವಾಗಿ ಬದಲಾಗಲಿದೆ ಎಂದು ಕೇಂದ್ರ ಸರಕಾರದ ಮೂಲಗಳಿಂದ ಮಾಹಿತಿ ಬಂದ ಬಳಿಕ ಇದೀಗ ದೇಶದೆಲ್ಲೆಡೆ ಈ ವಿಷಯವೇ ಚರ್ಚೆಯ ಹಾಟ್ ಟಾಪಿಕ್ ಆಗಿದೆ.
ಜಿ20 ಶೃಂಗ ಸಭೆಯಲ್ಲಿ (G20 Summit) ಭಾಗವಹಿಸಲಿರುವ ವಿವಿಧ ದೇಶಗಳ ಅತಿಥಿಗಳಿಗೆ ರಾಷ್ಟ್ರಪತಿ ಭವನದಲ್ಲಿ ಆಯೋಜಿಸಲಾಗಿರುವ ಔತಣ ಕೂಟದ ಆಮಂತ್ರಣ ಪತ್ರಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ್’ (President of Bharat) ಎಂದು ನಮೂದುಗೊಂಡ ಬಳಿಕವಂತೂ, ಕೇಂದ್ರ ಸರಕಾರ ನಮ್ಮ ದೇಶದ ಹೆಸರನ್ನು ಅಧಿಕೃತವಾಗಿ ಬದಲಿಸಲು ಉದ್ದೇಶಿಸಿದೆ ಎಂಬ ಊಹೆಗಳಿಗೆ ಇನ್ನಷ್ಟು ಪುಷ್ಟಿ ಬಂದಿತ್ತು.
ಒಂದುವೇಳೆ, ಇದು ಕಾರ್ಯರೂಪಕ್ಕೆ ಬಂದಲ್ಲಿ ದೇಶವೊಂದು ತನ್ನ ಹೆಸರನ್ನು ಅಧಿಕೃತವಾಗಿ ಬದಲಿಸಿಕೊಂಡ ಪ್ರಪ್ರಥಮ ನಿದರ್ಶನವಾಗಿ ಜಗತ್ತಿನ ಇತಿಹಾಸದ ಪುಟಗಳಲ್ಲಿ ದಾಖಲಾಗಲಿದೆ.
ಹಾಗೆಂದು, ಈ ಮೊದಲು ಜಗತ್ತಿನ ಬೇರೆ ಯಾವ ದೇಶಗಳೂ ತಮ್ಮ ಹೆಸರನ್ನು ಬದಲಿಸಿಕೊಂಡಿಲ್ಲವೆಂದಲ್ಲ. ಆದರೆ ಇವೆಲ್ಲಾ ಆಯಾ ದೇಶಗಳ ರಾಜಕೀಯ, ರಾಷ್ಟ್ರೀಯತೆ ಅಥವಾ ಬ್ರ್ಯಾಂಡಿಂಗ್ ಅಂಶಗಳಿಗಾಗಿ ಮಾತ್ರವೇ ಹೆಸರು ಬದಲಾವಣೆಗೊಂಡ ಘಟನೆಗಳು ನಡೆದಿವೆ.
ಹಾಗಾದರೆ ಜಗತ್ತಿನ ಬೇರಿನ್ಯಾವ ದೇಶಗಳು ತಮ್ಮ ಹೆಸರನ್ನು ಬದಲಿಸಿಕೊಂಡಿವೆ ಎಂದು ನೋಡೋದಾದ್ರೆ…
‘ಟರ್ಕಿ’ ಇದ್ದಿದ್ದು ‘ಟುರ್ಕ್ಯೇ’ ಆಗಿದೆ: ಆ ದೇಶದ ಅಧ್ಯಕ್ಷ ರಿಸಿಪ್ ತಯ್ಯಿಪ್ ಎರ್ಡೋಗನ್ ಟರ್ಕಿ ಎಂಬ ಹೆಸರನ್ನು ಟುರ್ಕ್ಯೇ ಎಂದು ಬದಲಾಯಿಸಿದ್ದಾರೆ.
ಯುರೋಪಿನ ಚಿಕ್ಕ ರಾಷ್ಟ್ರವಾಗಿರುವ ‘ಚೆಕ್ ಗಣರಾಜ್ಯ’ದ ಹೆಸರು 2016ರಲ್ಲಿ ‘ಚೆಕ್ಕಿಯಾ’ ಎಂದು ಬದಲಾಗಿದೆ.
ಆಫ್ರಿಕಾ ಖಂಡದ ರಾಷ್ಟ್ರವಾಗಿರುವ ‘ಸ್ವಾಝಿಲ್ಯಾಂಡ್’ ತನ್ನ ಹೆಸರನ್ನು ‘ಎಸ್ವಟಿನಿ’ ಎಂದು ಬದಲಾಯಿಸಿಕೊಂಡಿದೆ.
ಯುರೋಪ್ ಖಂಡದಲ್ಲಿರುವ ರಾಷ್ಟ್ರವಾಗಿರುವ ‘ಹಾಲೆಂಡ್’ 2020ರಲ್ಲಿ ತನ್ನ ಹೆಸರನ್ನು ಬದಲಾಯಿಸಿಕೊಂಡು ‘ನೆದರ್ಲ್ಯಾಂಡ್ಸ್’ ಆಗಿದೆ.
ಗ್ರೀಸ್ ನಿಂದ ಬೇರ್ಪಟ್ಟು ನ್ಯಾಟೋ ಗುಂಪಿಗೆ ಸೇರ್ಪಡೆಗೊಂಡ ‘ಮ್ಯಾಸಿಡೋನಿಯಾ’ ದೇಶ 2019ರಲ್ಲಿ ‘ರಿಪಬ್ಲಿಕ್ ಆಫ್ ನಾರ್ತ್ ಮ್ಯಾಸಿಡೋನಿಯಾ’ ಎಂದು ಬದಲಾಗಿದೆ.
ಪೋರ್ಚುಗೀಸ್ ಮತ್ತು ಬ್ರಿಟಿಷ್ ಆಡಳಿತಕ್ಕೊಳಪಟ್ಟಿದ್ದ ಕಾಲದಲ್ಲಿ ‘ಸಿಲೋನ್’ ಎಂದು ಕರೆಯಿಸಿಕೊಳ್ಳುತ್ತಿದ್ದ ಭಾರತದ ನೆರೆಯ ದ್ವೀಪ ರಾಷ್ಟ್ರ 2011ರಲ್ಲಿ ‘ಶ್ರೀಲಂಕಾ’ ಎಂದು ಬದಲಾಯಿತು.
‘ಫ್ರೀ ಸ್ಟೇಟ್’ ಎಂದು ಕರೆಸಿಕೊಳ್ಳುತ್ತಿದ್ದ ದೇಶವೊಂದು 1937ರಲ್ಲಿ ಹೊಸ ಸಂವಿಧಾನವನ್ನು ಅಳವಡಿಸಿಕೊಂಡ ಬಳಿಕ ‘ಐರ್ಲಂಡ್ ಗಣರಾಜ್ಯ’ವಾಗಿ ಬದಲಾಯಿತು.
‘ಕೇಪ್ ವವೆರ್ಡೆ’ ಎಂದು ಹೆಸರಿದ್ದ ಯುರೋಪಿನ ರಾಷ್ಟ್ರ ಆ ಬಳಿಕ ‘ರಿಪಬ್ಲಿಕ್ ಆಫ್ ಕೇಪ್ ವೆರ್ಡೆ’ ಎಂದು ತನ್ನ ಹೆಸರನ್ನು ಬದಲಾಯಿಸಿಕೊಂಡಿತು.
‘ಸಿಯಾಮ್’ ಎಂದು ಕರೆಸಿಕೊಳ್ಳುತ್ತಿದ್ದ ದೇಶ 1939ರಲ್ಲಿ ‘ಥಾಯ್ಲೆಂಡ್’ ಆಗಿ ಬದಲಾಯಿತು.
1989ರಲ್ಲಿ ‘ಬರ್ಮಾ’ ದೇಶದ ಹೆಸರು ‘ಮಯನ್ಮಾರ್’ ಎಂದು ಬದಲಾಯಿತು.
‘ಕಾಂಬೋಡಿಯಾ’ ದೇಶದ ಹೆಸರು ಅತಿ ಹೆಚ್ಚಿನ ಸಲ ಬದಲಾವಣೆಗೊಂಡಿದೆ, ಖೇಮೆರ್ ರಿಪಬ್ಲಿಕ್, ಡೆಮಾಕ್ರಾಟಿಕ್ ಕಂಪುಚಿಯಾ, ಸ್ಟೇಟ್ ಆಫ್ ಕಾಂಬೋಡಿಯಾ ಮತ್ತು ಕಿಂಗ್ ಡಮ್ ಆಫ್ ಕಾಂಬೋಡಿಯಾ ಎಂದೆಲ್ಲಾ ಕಾಲಕಾಲಕ್ಕೆ ಬದಲಾಗುತ್ತಾ ಬಂದಿದೆ.
ಇದೇ ರೀತಿಯಲ್ಲಿ ಹಲವಾರು ಬಾರಿ ಬದಲಾವಣೆಗೊಳಪಟ್ಟು ಇದೀಗ ‘ಕಾಂಗೋ’ ದೇಶ ‘ಡೆಮಾಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋ’ ಎಂದು ಕರೆಸಿಕೊಳ್ಳುತ್ತಿದೆ.
‘ಪರ್ಷಿಯಾ’ ಎಂದು ಕರೆಯಿಸಿಕೊಳ್ಳುತ್ತಿದ್ದ ಮಧ್ಯಪ್ರಾಚ್ಯದ ದೇಶವೊಂದು 1935ರಲ್ಲಿ ‘ಇರಾನ್’ ಆಗಿ ಬದಲಾವಣೆಗೊಂಡಿತು.
ಇದೀಗ ನಮ್ಮ ದೇಶದ ಹೆಸರನ್ನು ಇಂಡಿಯಾ ಬದಲಾಗಿ ಭಾರತ ಎಂದು ಅಧಿಕೃತವಾಗಿ ಬದಲಾಗಿದೆ ಎಂಬ ಸುದ್ದಿಗಳ ಹಿನ್ನಲೆಯಲ್ಲಿ ಈ ಮಾಹಿತಿಯನ್ನು ನೀಡಲಾಗಿದೆ.