ಇಂಗ್ಲೆಂಡ್: ಮೊನ್ನೆ ಮೊನ್ನೆಯಷ್ಟೇ ಮುಂಬೈನಲ್ಲಿ ಚಿಕನ್ ಖಾದ್ಯ ಆರ್ಡರ್ ಮಾಡಿದವರಿಗೆ ಚಿಕನ್ ನೊಂದಿಗೆ ಇಲ್ಲಿ ಸಿಕ್ಕಿದ್ದು, ಸುದ್ದಿಯಾಗಿತ್ತು. ಇದೀಗ ಇಂಗ್ಲೆಂಡ್‌ನಲ್ಲಿ ಅಂತಹುದೇ ಘಟನೆ ವರದಿಯಾಗಿದೆ.
ಸ್ಯಾಮ್ ಹೇವರ್ಡ್ ಎಂಬ ಇಂಗ್ಲೆಂಡ್ ನಿವಾಸಿಯೊಬ್ಬರು ತಾವು ಆರ್ಡರ್ ಮಾಡಿದ್ದ ಚೈನೀಸ್ ಸೂಪ್‌ನಲ್ಲಿ ಜೀವಂತವಾಗಿದ್ದ ಇಲಿಮರಿಯೊಂದನ್ನು ಕಂಡು ಶಾಕ್ ಆಗಿದ್ದಾರೆ. ಮಶ್ರೂಮ್ ನೂಡಲ್ ಸೂಪ್ ಹೋಂ ಡೆಲಿವರಿಗೆ ಆರ್ಡರ್ ಮಾಡಿದ್ದ ಅವರು ಮನೆಗೆ ಬಂದ ಸೂಪ್‌ನಲ್ಲಿ ಇಲಿ ಬಿದ್ದಿರುವುದನ್ನು ಕಂಡು ಕಂಗಾಲಾಗಿದ್ದಾರೆ.
ಆರಂಭದಲ್ಲಿ ಅವರಿಗೆ ಸೂಪ್‌ನಲ್ಲಿ ಇಲಿ ಇರುವುದು ತಿಳಿದಿಲ್ಲ. ದೊಡ್ಡ ಅಣಬೆ ಇರಬೇಕೆಂದುಕೊಂಡು ಸೂಪ್ ಕುಡಿಯಲು ಆರಂಭಿಸಿದ ಅವರಿಗೆ ಆ ವಸ್ತು ಅಲುಗಾಡುತ್ತಿರುವುದು ಕಂಡಿದೆ. ಇದರಿಂದ ಅನುಮಾನಗೊಂಡು ಪರಿಶೀಲಿಸಿದ್ದಾರೆ. ಆಗ ಸೂಪ್‌ನಲ್ಲಿ ಬಾಲ ಕಾಣಿಸಿದೆ. ಅದನ್ನು ಹಿಡಿದು ಮೇಲೆತ್ತಿದಾಗ ಇಲಿಮರಿ ಎಂಬುದು ಗೊತ್ತಾಗಿದೆ.
ಇದರಿಂದ ದಿಗ್ಭ್ರಮೆಗೊಂಡ ಹೇವರ್ಡ್ ಸೂಪ್ನಲ್ಲಿದ್ದ ಆ ಇಲಿಯ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಬಳಿಕ ಆ ರೆಸ್ಟೋರೆಂಟ್ ಅನ್ನು ಸಂಪರ್ಕಿಸಿದ್ದಾರೆ. ಸೂಪ್‌ನಲ್ಲಿ ಇಲಿ ಸಿಕ್ಕ ವಿಷಯವನ್ನು ಅವರಿಗೆ ತಿಳಿಸಿದ್ದಾರೆ. ಆದರೆ, ಆ ರೆಸ್ಟೋರೆಂಟ್ ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ಹೇಳಿತು. ಅಲ್ಲದೆ, ಹಣವನ್ನು ಮರುಪಾವತಿ ಮಾಡಲು ನಿರಾಕರಿಸಿತು. ಅವರು ಕ್ಯಾಶ್ ಆನ್ ಡೆಲಿವರಿ ಆಯ್ಕೆ ಮಾಡಿಕೊಂಡಿದ್ದರಿಂದ ಆನ್ಲೈನ್ನಲ್ಲಿ ಹಣ ಪಾವತಿಸಿದ ದಾಖಲೆ ಇರಲಿಲ್ಲ. ಅವರ ಬಳಿ ರಶೀದಿ ಕೂಡ ಇರಲಿಲ್ಲ. ಇದರಿಂದಾಗಿ ಅವರಿಗೆ ಅವರು ಪಾವತಿ ಮಾಡಿದ ಹಣ ವಾಪಾಸ್ ಸಿಗಲಿಲ್ಲ.