ಮಂಗಳೂರು: ಐದು ತಿಂಗಳ ಹಿಂದೆಯಷ್ಟೇ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ್ದ ಕುಲದೀಪ್ ಜೈನ್ IPS ಅವರನ್ನು ವರ್ಗಾವಣೆಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಕುಲದೀಪ್ ಜೈನ್ ಅವರ ಸ್ಥಾನಕ್ಕೆ ಹಿರಿಯ IPS ಅಧಿಕಾರಿ ಅನುಪಮ್ ಅಗರ್ವಾಲ್ ಅವರನ್ನು ನೇಮಕಗೊಳಿಸಲಾಗಿದೆ.
ಕುಲದೀಪ್ ಜೈನ್ ಸೇರಿದಂತೆ ಒಟ್ಟು 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಇಂದು (ಸೆ.05) ಆದೇಶ ಹೊರಡಿಸಿದೆ. ಕುಲದೀಪ್ ಜೈನ್ ಅವರಿಗೆ ಸದ್ಯಕ್ಕೆ ಯಾವುದೇ ಹುದ್ದೆಯನ್ನು ತೋರಿಸದೇ ವರ್ಗಾವಣೆಗೊಳಿಸಲಾಗಿದೆ.
ನೂತನ ಆಯುಕ್ತರಾಗಿ ನೇಮಕಗೊಂಡಿರುವ ಅನುಪಮ್ ಅಗರ್ವಾಲ್ ಮೂಲತಃ ರಾಜಸ್ಥಾನದ ಜೋಧ್ ಪುರದವರಾಗಿದ್ದು, ಇವರು 2008ನೇ ಬ್ಯಾಚ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ.
ದಕ್ಷ ಅಧಿಕಾರಿ ಎಂದೇ ಗುರುತಿಸಿಕೊಂಡಿದ್ದ ಕುಲದೀಪ್ ಜೈನ್, ಈ ಭಾಗದಲ್ಲಿ ಬೇರೂರುತ್ತಿದ್ದ ಡ್ರಗ್ ಮಾಫಿಯಾವನ್ನು ಹತ್ತಿಕ್ಕುವಲ್ಲಿ ಮತ್ತು ಡ್ರಗ್ಸ್ ಫ್ರೀ ಸಿಟಿ ಮಾಡುವಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿದ್ದರು.
ಇಷ್ಟು ಮಾತ್ರವಲ್ಲದೇ, ಮಟ್ಕಾ, ಜೂಜು ಅಡ್ಡೆಗಳ ಮೇಲೂ ನಿರಂತರ ದಾಳಿ ನಡೆಸಿ ಕಿಡಿಗೇಡಿಗಳಿಗೆ ಬಿಸಿ ಮುಟ್ಟಿಸುವಲ್ಲೂ ಕುಲದೀಪ್ ಜೈನ್ ಯಶಸ್ವಿಯಾಗಿದ್ದರು.
ಇದೀಗ, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಡ್ರಗ್ ಮಾಫಿಯಾವನ್ನು ಮಟ್ಟಹಾಕುವಲ್ಲಿ ಕಮಿಷನರ್ ತೆಗೆದುಕೊಂಡ ಕಠಿಣ ಕ್ರಮಗಳೇ ಅವರ ವರ್ಗಾವಣೆಗೆ ಕಾರಣವಾಯ್ತೇ ಎಂಬ ಪ್ರಶ್ನೆ ಈ ಭಾಗದ ಪ್ರಜ್ಞಾವಂತ ನಾಗರಿಕರಲ್ಲಿ ಮೂಡುವಂತಾಗಿದೆ.