ನವದೆಹಲಿ: ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. 2023ರ ಡಿಸೆಂಬರ್ ನಲ್ಲಿಯೇ ಚುನಾವಣೆಯೇ ಘೋಷಣೆ ಆಗಬಹುದು ಎಂದು ಪಶ್ಚಿಮಬಂಗಾಳ ಮುಖ್ಯಮಂತ್ರಿ ಈ ಹಿಂದೆ ಹೇಳಿಕೆ ನೀಡಿದ್ದರು. ಈ ನಿಟ್ಟಿನಲ್ಲಿ 2024ರಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ವಿವಿಧ ರಾಜಕೀಯ ಭರ್ಜರಿ ಸಿದ್ಧತೆ ನಡೆಸಿದ್ದು, ಇಂಡಿಯಾ ಒಕ್ಕೂಟ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಮಣಿಸಲೇ ಬೇಕು ಎಂದು ಪಣ ತೊಟ್ಟಿವೆ ಈ ನಿಟ್ಟಿನಲ್ಲಿ ಹಲವು ಸಭೆ, ತಂತ್ರಗಳನ್ನು ಹೂಡಿವೆ. ಆದರೆ ದೇಶದ ಶೇ.80ರಷ್ಟು ಭಾರತೀಯರು ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರ ಪರ ಒಲವು ಹೊಂದಿದ್ದಾರೆ ಎಂದು ಸಮೀಕ್ಷೆಯೊಂದು ಹೇಳಿರುವುದು ಮಹತ್ವ ಪಡೆದಿದೆ.
ಸಮೀಕ್ಷೆ ಹೇಳಿದ್ದೇನು: PEW ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ, ದೇಶದ ಸುಮಾರು 80 ಪ್ರತಿಶತದಷ್ಟು ಭಾರತೀಯರು ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಆಶಾಭಾವ ಹೊಂದಿದ್ದಾರೆ ಮತ್ತು ಪ್ರತೀ 10 ಭಾರತೀಯರಲ್ಲಿ ಏಳು ಮಂದಿ ತಮ್ಮ ದೇಶವು ಇತ್ತೀಚಿನ ದಿನಗಳಲ್ಲಿ ಪ್ರಭಾವಶಾಲಿಯಾಗಿ ಬೆಳೆಯುತ್ತಿದೆ ಎಂದು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಬಿಡುಗಡೆಯಾದ ಸಮೀಕ್ಷೆಯ ಫಲಿತಾಂಶದ ಪ್ರಕಾರ, ಪ್ರತೀ 10 ಮಂದಿ ಭಾರತೀಯರಲ್ಲಿ ಎಂಟು ಮಂದಿ ಮೋದಿಯವರ ಪರ ” ಆಶಾಭಾವದ ಅಭಿಪ್ರಾಯ ಹೇಳಿದ್ದಾರೆ.
ಇದರಲ್ಲಿ (ಶೇ. 55) “ಅತ್ಯಂತ ಆಶಾಭಾವ” ಅಭಿಪ್ರಾಯವಿದೆ. ಅಲ್ಲದೆ 2024 ರ ಲೋಕಸಭೆ ಚುನಾವಣೆಯಲ್ಲಿ ಗೆದ್ದು ಮೂರನೇ ಬಾರಿಗೂ ಮೋದಿ ಅವರನ್ನೇ ಪ್ರಧಾನಿಯಾಗಿ ಬಯಸುತ್ತಿದ್ದಾರೆ. ಕೇವಲ ಐದನೇ ಒಂದು ಭಾಗದಷ್ಟು ಭಾರತೀಯರು ಮೋದಿಯ ಬಗ್ಗೆ ಪ್ರತಿಕೂಲವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.