ನವದೆಹಲಿ: ಭಾರತದ ಬಾಹ್ಯಾಕಾಶ ವಿಕ್ರಮಕ್ಕೊಂದು ಸುವರ್ಣ ಗರಿ ಸೇರ್ಪಡೆಗೊಂಡಿದೆ. ಶತಕೋಟಿ ಭಾರತೀಯರು ಮಾತ್ರವಲ್ಲದೇ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿದ್ದ ಚಂದಿರನ ದಕ್ಷಿಣ ಧ್ರುವದಲ್ಲಿ ಇಸ್ರೋ ತನ್ನ ಪ್ರಥಮ ಹೆಜ್ಜೆಯನ್ನೂರುವಲ್ಲಿ ಯಶ ಸಾಧಿಸಿದೆ.
ಇಂದು (ಆ.23) ಸಾಯಂಕಾಲ 6.04ಕ್ಕೆ ಸರಿಯಾಗಿ ವಿಕ್ರಂ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ‘ಸಾಫ್ಟ್ ಲ್ಯಾಂಡಿಂಗ್’ ಮಾಡುವ ಮೂಲಕ ಚಂದ್ರಯಾನ-2ರ ವೈಫಲ್ಯವನ್ನು ಮೆಟ್ಟಿನಿಂತು ಕೇವಲ ನಾಲ್ಕು ವರ್ಷಗಳಲ್ಲೇ ತನ್ನ ಮರು ಪ್ರಯತ್ನದಲ್ಲಿ ಯಶಸ್ವಿಯಾಗಿ ಚಂದರಿನ ಅಂಗಳಕ್ಕೆ ತನ್ನ ವಿಕ್ರಂ ನೌಕೆಯನ್ನು ಇಳಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿದೆ.
ಇಸ್ರೋ ವಿಜ್ಞಾನಿಗಳ ಈ ಅನುಪಮ ವಿಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ವಿಶ್ವದ ಪ್ರಮುಖ ದೇಶಗಳ ನಾಯಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.