ಮಂಗಳೂರು: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅಪ್ರಾಪ್ತ ಬಾಲಕಿ (ವಿಶೇಷ ಸಾಮರ್ಥ್ಯ) ಮೇಲೆಯೇ ಅತ್ಯಾಚಾರ ನಡೆದಿರುವ ಶಾಕಿಂಗ್ ಘಟನೆಯೊಂದು ವರದಿಯಾಗಿದೆ.
ಅತ್ಯಾಚಾರ ಕೃತ್ಯವೆಸಗಿದ ಆರೋಪಿ ಅಬ್ದುಲ್ ಹಲೀಂ ಹಾಗೂ ಅತ್ಯಾಚಾರ ಮಾಡಲು ಸಹಕಾರ ನೀಡಿದಾಕೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬೈಕ್ ಅಪಘಾತದಲ್ಲಿ ಅಬ್ದುಲ್ ಹಲೀಂ ಮತ್ತು ಆತನ ಸ್ನೇಹಿತ ಗಾಯಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅವರನ್ನು ನೋಡಲು ಮಹಿಳೆಯೊಬ್ಬರು ತೆರಳಿದ್ದು, ಆಕೆ ತನ್ನ ಭಿನ್ನ ಸಾಮರ್ಥ್ಯದ ಅಪ್ರಾಪ್ತ ಮಗಳನ್ನು ಕರೆದುಕೊಂಡು ಹೋಗಿದ್ದರು.
ಈ ವೇಳೆ ಶಮೀನಾ ಬಾನು ಎಂಬುವರ ಜೊತೆ ಬಾಲಕಿಯನ್ನು ಬಿಟ್ಟು ಹುಡುಗಿಯ ತಾಯಿ ಅಪಘಾತ ಘಟನೆಯ ಬಗ್ಗೆ ದೂರು ನೀಡಲು ಪೊಲೀಸ್ ಠಾಣೆಗೆ ತೆರಳಿದ್ದರು.
ಇತ್ತ, ಆಸ್ಪತ್ರೆಯಲ್ಲಿದ್ದ ವೇಳೆ ಅಬ್ದುಲ್ ಹಲೀಂ – ಶಮೀನಾ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದನ್ನು ಬಾಲಕಿ ತಪ್ಪಿ ನೋಡಿದ್ದಳು.
ಇದು ಗೊತ್ತಾಗುತ್ತಿದ್ದಂತೆ ಅಬ್ದುಲ್ ಹಲೀಂ ಬಾಲಕಿ ಮೇಲೆಯೇ ಅತ್ಯಾಚಾರ ನಡೆಸಲು ಮುಂದಾಗಿದ್ದಾನೆ. ಆದರೆ ಇದಕ್ಕೆ ಆ ಬಾಲಕಿ ಪ್ರತಿರೋಧ ವ್ಯಕ್ತಪಡಿಸಿದ್ದಾಳೆ. ಈ ವೇಳೆ ಶಮೀನಾ ಬಾಲಕಿಯ ಕೈ ಹಿಡಿದು, ಬಾಯಿ ಮುಚ್ಚಿ ಅತ್ಯಾಚಾರ ಮಾಡಲು ಸಹಾಯ ಮಾಡಿದ್ದಾಳೆ ಎಂದು ಆರೋಪಿಸಲಾಗಿದೆ.
ಈ ನಿಟ್ಟಿನಲ್ಲಿ ಶಮೀನಾಳನ್ನು ಪೊಲೀಸರು ಬಂಧಿಸಿದ್ದು, ಇನ್ನು ಕೃತ್ಯ ನಡೆಸಿ ತನ್ನೂರು ಬಿಹಾರಕ್ಕೆ ಪರಾರಿಯಾಗಲೆತ್ನಿಸುತ್ತಿದ್ದ ಪ್ರಮುಖ ಆರೋಪಿ ಅಬ್ದುಲ್ ಹಲೀಂನನ್ನು ಪೊಲೀಸರು ಗೋವಾದಲ್ಲಿ ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.