ನವದೆಹಲಿ: ಎದುರಿರುವ ವ್ಯಕ್ತಿಗಳನ್ನು ಬೆತ್ತಲೆಯಾಗಿ ತೋರಿಸುವ, ಭವಿಷ್ಯವನ್ನು ಹೇಳುವ ಕನ್ನಡಿ ಬೇಕೇ? ಎಂಬ ಮಾತುಗಳಿಗೆ ಮರುಳಾದ ಉತ್ತರಪ್ರದೇಶದ ಅವಿನಾಶ್ ಕುಮಾರ್ ಶುಕ್ಲಾ ಬರೋಬ್ಬರಿ 9 ಲಕ್ಷ ರೂ. ಕಳೆದುಕೊಂಡಿದ್ದಾರೆ.
ಆಸೆಗೆ ಬಿದ್ದ 74 ವರ್ಷದ ವೃದ್ಧ ಅವಿನಾಶ್ ತಾವು ಮೋಸ ಹೋಗಿದ್ದು ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವಂಚನೆಯ ಜಾಲವನ್ನು ಹೆಣೆದ ಪಶ್ಚಿಮ ಬಂಗಾಳದ ಪಾರ್ಥ ಸಿಂಘ್ರಾಯ್, ಮೊಲಯ ಸರ್ಕಾರ್, ಸುದೀಪ್ತ ಸಿನ್ಹಾ ರಾಯ್ರನ್ನು ಒಡಿಶಾದ ನಯಾಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ ಕಾರು, 28,000 ರೂ. ನಗದು, ಕೆಲ ನಕಲಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸಿಂಗಾಪುರದ ಖ್ಯಾತ ಕಂಪನಿಯೊಂದರ ಉದ್ಯೋಗಿಗಳಂತೆ ಪ.ಬಂಗಾಳದ ಮೂವರು ವ್ಯಕ್ತಿಗಳು ನಟಿಸಿದ್ದಾರೆ. ಇದೇ ವೇಳೆ ಅವಿನಾಶ್ಗೂ ಇವರ ಪರಿಚಯವಾಗಿದೆ. ಈ ಮೂವರು ತಾವು ಪ್ರಾಚ್ಯ ವಸ್ತುಗಳನ್ನು ಹೊಂದಿದ್ದೇವೆ. ಅದರಲ್ಲೊಂದು ಈ ಅದ್ಭುತ ಕನ್ನಡಿ, ಅದಕ್ಕೆ ವಿಶೇಷ ಶಕ್ತಿಯಿದೆ. ಆ ಕನ್ನಡಿ ಮೂಲಕ ನೋಡಿದರೆ ಎದುರಿರುವ ವ್ಯಕ್ತಿ ನಿಮಗೆ ಬೆತ್ತಲೆಯಾಗಿ ಕಾಣುತ್ತಾನೆ. ನಾಸಾ ಕೂಡ ಅದನ್ನು ಬಳಸುತ್ತದೆ, ನೀವದನ್ನು ಕೊಳ್ಳಬೇಕಾದರೆ 2 ಕೋಟಿ ರೂ. ಕೊಡಿ ಎಂದು ನಂಬಿಸಿದ್ದಾರೆ. ಅಂತೂ ಭುವನೇಶ್ವರದ ಹೋಟೆಲ್ಗೆ ಅವಿನಾಶ್ರನ್ನು ಕರೆಸಿಕೊಳ್ಳಲು ಯಶಸ್ವಿಯಾಗಿದ್ದಾರೆ. ಅಲ್ಲಿ ಇವೆಲ್ಲ ಬರೀ ನಾಟಕ ಎಂದು ಗೊತ್ತಾಗಿದೆ. ಅಷ್ಟರಲ್ಲಾಗಲೇ ಈ ವ್ಯಕ್ತಿ 9 ಲಕ್ಷ ರೂ. ಕಳೆದುಕೊಂಡಾಗಿತ್ತು!