main logo

‘ಪತ್ರಕರ್ತರ ಸಮಾಜಮುಖಿ ಕೆಲಸಗಳಿಂದ ಮಾದರಿ ಸಮಾಜ ನಿರ್ಮಾಣ ಸಾಧ್ಯ’:  ಕೆ.ವಿ. ಪ್ರಭಾಕರ್

‘ಪತ್ರಕರ್ತರ ಸಮಾಜಮುಖಿ ಕೆಲಸಗಳಿಂದ ಮಾದರಿ ಸಮಾಜ ನಿರ್ಮಾಣ ಸಾಧ್ಯ’:  ಕೆ.ವಿ. ಪ್ರಭಾಕರ್

ಮಂಗಳೂರು: ‘ಪತ್ರಕರ್ತರು ಕೇವಲ ಸುದ್ದಿಮನೆಗೆ ಮಾತ್ರ ಸೀಮಿತವಾಗಿರದೇ ಸಮಾಜಮುಖಿ ಕೆಲಸಗಳನ್ನು ಮಾಡಿದಾಗ ಮಾತ್ರ ಮಾದರಿ ಸಮಾಜ ನಿರ್ಮಾಣ ಸಾಧ್ಯ. ಈ ವಿಚಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರು ಹಾಗೂ ಕಾರ್ಯನಿರತ ಪತ್ರಕರ್ತರ ಸಂಘವು ವಿಭಿನ್ನ ಪಂಕ್ತಿ ಹಾಕಿಕೊಟ್ಟಿದ್ದು ಇದು ರಾಜ್ಯಕ್ಕೆ ಮಾದರಿ ಆಗಿದೆ’ ಎಂದು ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ. ವಿ. ಪ್ರಭಾಕರ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಪ್ರೆಸ್‌ಕ್ಲಬ್ ಮತ್ತು ಪತ್ರಿಕಾ ಭವನ ಟ್ರಸ್ಟ್ ಸಹಯೋಗದಲ್ಲಿ ಪತ್ರಿಕಾ ಭವನದಲ್ಲಿ ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿರುವ ಕುತ್ಲೂರು ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 100 ಮಕ್ಕಳಿಗೆ ಎಂಸಿಎಫ್‌ನ  ಸಿಎಸ್‌ಆರ್ ನಿಧಿ ಮತ್ತು ಇನ್ನರ್‌ವೀಲ್ ಕ್ಲಬ್ ವತಿಯಿಂದ ಬಿಜೈ ಕಾಪಿಕಾಡ್ ಅಂಗನವಾಡಿಯ ಮಕ್ಕಳಿಗೆ ಬುಧವಾರ ಸಮವಸ್ತ್ರ ವಿತರಿಸಿ ಅವರು ಮಾತನಾಡಿದರು.

‘ಪತ್ರಕರ್ತರದು ಬರೀ ಟೀಕೆ ಮಾಡುವ ಬದಲು ಇಂತಹ ಸಕಾರಾತ್ಮಕ ಚಿಂತನೆಗಳ ಮೂಲಕ ಸಮಾಜ ಕಟ್ಟುವ ಕೆಲಸ ಶ್ಲಾಘನೀಯ. ಗ್ರಾಮ ವಾಸ್ತವ್ಯ ಮಾಡಿ, ಅಲ್ಲಿನ ಶಾಲೆಯ ಸಮಸ್ಯೆಗೆ ಪತ್ರಕರ್ತರ ಸಂಘವು ಸ್ಪಂದನೆ ಮಾಡುತ್ತಿರುವ ಕಾರ್ಯ ನಿಜಕ್ಕೂ ಉತ್ತಮ ಕೆಲಸ’ ಎಂದು ಪ್ರಭಾಕರ್ ಹೇಳಿದರು.

‘ಕಾರ್ಯನಿರತ ಪತ್ರಕರ್ತರ ಸಂಘದ ಚಟುವಟಿಕೆಗಳಿಗೆ ಸರಕಾರದಿಂದ ನೆರವು ಒದಗಿಸಲು ಸದಾ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು. ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರು ಹಾಗೂ ಪತ್ರಕರ್ತರ ಸಂಘ ರಾಜ್ಯಕ್ಕೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸರಕಾರ, ಶಾಸಕರು, ಜಿಲ್ಲಾಡಳಿತ ಮಾಡಬೇಕಾದ ಕೆಲಸವನ್ನು ಪತ್ರಕರ್ತರ ಸಂಘ ಮಾಡುತ್ತಿದೆ’ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ‘ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರು ಪ್ರಶ್ನೆ ಕೇಳುವುದು ಮಾತ್ರವಲ್ಲ, ಕೆಲಸ ಮಾಡಿಯೂ ತೋರಿಸುತ್ತಾರೆ ಎಂಬುದಕ್ಕೆ ಇಂತಹ ಕೆಲಸಗಳೆ ಸಾಕ್ಷಿ. ಕುತ್ಲೂರು ಶಾಲೆ ಅಭಿವೃದ್ಧಿ ಪಡಿಸುವ ಮೂಲಕ ಇದನ್ನು ಸಾಬೀತು ಮಾಡಿದ್ದಾರೆ’ ಎಂದರು.

ಕುತ್ಲೂರು ಉನ್ನತೀಕರಿಸಿದ ಸರಕಾರಿ ಹಿ.ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್ ಮಾತನಾಡಿದರು.

ಭಾರತೀಯ ಸೇನೆಗೆ ಆಯ್ಕೆಯಾದ ಕುತ್ಲೂರು ಶಾಲೆಯ ಹಳೆ ವಿದ್ಯಾರ್ಥಿ ವಿಜೇತ್ ಮಡಿವಾಳ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.

ಎಂಸಿಎಫ್ ಎಚ್‌ಆರ್ ವಿಭಾಗ ಮುಖ್ಯಸ್ಥ ಚೇತನ್ ಮೆಂಡೋನ್ಸಾ, ಇನ್ನರ್ ವೀಲ್ ಕ್ಲಬ್ ಮಂಗಳೂರು ನಾರ್ಥ್ ಅಧ್ಯಕ್ಷೆ ಗೀತಾ ಬಿ. ರೈ ಪಾಲ್ಗೊಂಡಿದ್ದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಜಿಲ್ಲಾ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್, ಮಂಗಳೂರು ಪ್ರೆಸ್‌ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ಆರ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಜಗನ್ನಾಥ ಶೆಟ್ಟಿ ಬಾಳ,  ಇಬ್ರಾಹಿಂ ಅಡ್ಕಸ್ಥಳ, ಜಿಲ್ಲಾ ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟಾ ಇದ್ದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು. ಪುಷ್ಪರಾಜ್ ಬಿ. ಎನ್. ನಿರೂಪಿಸಿದರು.

Related Articles

Leave a Reply

Your email address will not be published. Required fields are marked *

error: Content is protected !!