ಹಾಸನ: ತನ್ನ ಸ್ಪೋಟಕ ಭವಿಷ್ಯವಾಣಿಯ ಮೂಲಕ ಸದಾ ಸುದ್ದಿಯಲ್ಲಿರುವ ಕೋಡಿಮಠ ಶ್ರೀಗಳು ಇದೀಗ ರಾಜ್ಯ ರಾಜಕಾರಣಕ್ಕೆ ಸಂಬಂಧಿಸಿದಂತೆ ಹೊಸ ಭವಿಷ್ಯ ನುಡಿದಿದ್ದಾರೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರಾ ಎಂಬ ಪ್ರಶ್ನೆಗೆ ಕೋಡಿಮಠ ಶ್ರೀಗಳು ಉತ್ತರಿಸುತ್ತಾ, ಲೋಕಸಭಾ ಚುನಾವಣೆಯ ಬಳಿಕ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುವ ಸಾಧ್ಯತೆಗಳಿವೆ ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದ್ದಾರೆ.
ಆದರೆ ರಾಜ್ಯ ಸರಕಾರದ ಭವಿಷ್ಯದ ಬಗ್ಗೆ ಪಾಸಿಟಿವ್ ಮಾತುಗಳನ್ನು ಆಡಿರುವ ಶ್ರೀಗಳು, ರಾಜ್ಯ ಸರಕಾರ ಸುಭದ್ರವಾಗಿರಲಿದೆ ಆದರೆ ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೋ ಎಂಬುದು 2024ರ ಬಳಿಕವಷ್ಟೇ ತೀರ್ಮಾನವಾಗಲಿದೆ ಎಂದು ಅವರು ಹೇಳಿದ್ದಾರೆ.
ಇನ್ನು, ಕೇಂದ್ರದಲ್ಲಿ ಈ ಬಾರಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತಾಗಿ ಚುನಾವಣೆ ಸಮೀಪಿಸಿದಾಗ ತಿಳಿಸುತ್ತೇನೆ ಎಂದು ಹೇಳಿದರು.
ಇನ್ನು ಮಳೆಯ ಬಗ್ಗೆ ಮಾತನಾಡಿದ ಶ್ರೀಗಳು, ರಾಜ್ಯದಲ್ಲಿ ಮಳೆಯಾಗಲಿದ್ದು, ಹೆಚ್ಚು ತೊಂದರೆಯೇನೂ ಆಗುವುದಿಲ್ಲ, ಅನ್ನಕ್ಕೆ ಯಾವುದೇ ತೊಂದರೆಯಿಲ್ಲ ಎಂದು ಹೇಳಿದ್ದಾರೆ.