ಬೆಂಗಳೂರು: ಸೈಬರ್ ವಂಚನೆ ಆರೋಪಿಯಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕರ್ನಾಟಕದ ನಾಲ್ವರು ಪೊಲೀಸರನ್ನು ಶುಕ್ರವಾರ ಅಮಾನತುಗೊಳಿಸಲಾಗಿದೆ.
ಈ ಸಂಬಂಧ ಎಸಿಪಿ ನೀಡಿದ ವರದಿ ಮೇರೆಗೆ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಈ ಸಂಬಂಧ ಎಸಿಪಿ ನೀಡಿದ ವರದಿ ಮೇರೆಗೆ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಅಮಾನತು ಆದೇಶ ಹೊರಡಿಸಿದ್ದಾರೆ. ಅಮಾನತುಗೊಂಡ ಪೊಲೀಸರನ್ನು ಇನ್ಸ್ ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ ಸ್ಟೇಬಲ್ ಗಳಾದ ವಿಜಯ್ ಕುಮಾರ್, ಶಿವಣ್ಣ ಮತ್ತು ಕಾನ್ ಸ್ಟೇಬಲ್ ಸಂದೇಶ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೆಂಗಳೂರಿನ ಸೈಬರ್ ಕ್ರೈಮ್, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಉದ್ಯೋಗ ಕೊಡಿಸುವ ನೆಪದಲ್ಲಿ 26 ಲಕ್ಷ ರೂಪಾಯಿ ವಂಚಿಸಲಾಗಿದೆ ಎಂದು ಶ್ರೀಕಾಂತ್ ಎಂಬುವರು ಜೂನ್ 16ರಂದು ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮಡಿಕೇರಿ ಮೂಲದ ಐಸಾಕ್ ಎಂಬಾತನ ಖಾತೆಗೆ ತನಿಖೆಯ ವೇಳೆ 10,000 ರೂ. ವರ್ಗಾವಣೆ ಆಗಿರುವುದು ತನಿಖೆ ವೇಳೆ ಪತ್ತೆಯಾಗಿತ್ತು. ಐಸಾಕ್ ವಿಚಾರಣೆ ವೇಳೆ ಬ್ಯಾಂಕ್ ಖಾತೆಯನ್ನು ರಾಜೇಶ್ ಎಂಬಾತನ ಪರವಾಗಿ ತೆರೆಯಲಾಗಿದೆ ಎಂಬುದನ್ನು ಅರಿತ ಪೊಲೀಸರು ಆತನ ವಿಚಾರಣೆ ನಡೆಸಿದ್ದರು. ಈ ವೇಳೆ ಕೇರಳದ ನೌಶಾದ್ನ ಹೆಸರು ಹೊರಬಂದಿತ್ತು.
ಹೀಗಾಗಿ ಆರೋಪಿ ಪೊಲೀಸ್ ತಂಡ ಕೇರಳದ ಕಲ್ಲೇಂಚೇರಿಗೆ ತೆರಳಿ ನೌಶಾದ್ ನನ್ನು ವಶಕ್ಕೆ ಪಡೆದು 3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಹಣ ನೀಡಲು ವಿಫಲವಾದರೆ ಕ್ರಿಪ್ಟೋ ಕರೆನ್ಸಿ ಪ್ರಕರಣದಲ್ಲಿ ಫಿಕ್ಸ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ನೌಶಾದ್ ಕರ್ನಾಟಕ ಪೊಲೀಸರ ವಿರುದ್ಧ ಕಲಮಶ್ಶೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.