ಕಲಬುರಗಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಕೆಲವೇ ತಿಂಗಳು ಕಳೆದಿದೆ. ಈ ನಡುವೆ ಸಚಿವರು ವರ್ಸಸ್ ಶಾಸಕರ ನಡುವೆ ಹಗ್ಗಾಜಗ್ಗಾಟ ಜೋರಾಗಿದೆ ಎಂಬ ಮಾತು ಕೇಳಿಬರುತ್ತಿದೆ. ಗುರುವಾರ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಆಳಂದ ಶಾಸಕ ಬಿಆರ್ ಪಾಟೀಲ್ ರಾಜೀನಾಮೆ ನೀಡುವ ಬಗ್ಗೆ ಪ್ರಸ್ತಾಪ ಮಾಡಿದ್ದು, ಇದು ರಾಜ್ಯ ಕಾಂಗ್ರೆಸ್ನಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಬಗ್ಗೆ ಸ್ವತಃ ಶಾಸಕರೇ ಸ್ಪಷ್ಟನೆ ನೀಡಿದ್ದಾರೆ. ಶಾಸಕ ಬಿಆರ್ ಪಾಟೀಲ್ ಕಲಬುರಗಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದದ್ದು, ನಾನು ನನ್ನ ಆತ್ಮಗೌರವಕ್ಕೆ ಧಕ್ಕೆ ಬಂದ್ರೆ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದು ಸತ್ಯ. ಆದ್ರೆ ಯಾವ ಕಾರಣಕ್ಕೆ ಎನ್ನುವುದು ಸೇರಿದಂತೆ ಎಲ್ಲಾ ವಿಚಾರಗಳನ್ನು ಬಹಿರಂಗವಾಗಿ ಹೇಳಲು ಆಗಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಮೊನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ, ನಾನು ಕ್ಷಮೆ ಕೇಳಿಲ್ಲ, ಕ್ಷಮೆ ಕೇಳುವಂತಹ ತಪ್ಪು ಕೂಡಾ ನಾನು ಮಾಡಿಲ್ಲ, ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಕೇಳುವದು ನಮ್ಮ ಹಕ್ಕು. ಶಾಸಕಾಂಗ ಪಕ್ಷದ ಸಬೆಯಲ್ಲಿ ನಮ್ಮ ಎಲ್ಲಾ ವಿಚಾರ ಹೇಳಿದ್ದೇವೆ. ಅದಕ್ಕೆ ಪರಿಹಾರ ಕೂಡಾ ಸಿಕ್ಕಿದೆ. ಕೆಲ ಸಚಿವರ ವರ್ತನೆ ಸರಿಯಿರಲಿಲ್ಲ. ಹೀಗಾಗಿ ಅದನ್ನು ಸರಿಪಡಿಸಿಕೊಳ್ಳಬೇಕು ಎನ್ನುವುದು ನಮ್ಮ ಆಗ್ರಹವಾಗಿತ್ತು. ಆದ್ರೆ ಸಚಿವರಿಗೆ ಸಿಎಂ ಏನು ಹೇಳಿದ್ದಾರೆ ಎನ್ನುವುದು ಅವರಿಗೆ ಗೊತ್ತು. ಆದ್ರೆ ಸದ್ಯ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.