ಮಂಗಳೂರು: ಮಂಗಳಮುಖಿಯರು ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ನಗರದಲ್ಲಿ ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ಶನಿವಾರ ರಾತ್ರಿ ಏಕಾಏಕಿಯಾಗಿ ಪೊಲೀಸರು 13 ಮಂದಿ ಮಂಗಳಮುಖಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.
ಸಂಜೆಯಾಗುತ್ತಿದ್ದಂತೆ ಮಂಗಳಮುಖಿಯರು ಮಂಗಳೂರು ನಗರದ ಕುಂಟಿಕಾನದ ಬಳಿ ಇರುವ ಅಂಡರ್ ಪಾಸ್ ಕೆಳಗೆ ನಿಂತು ಗಂಡಸರಿಗೆ ಲೈಂಗಿಕ ಕ್ರಿಯೆಗೆ ಪ್ರಚೋದನೆ ನೀಡುವುದು, ದಾರಿಹೋಕರಿಂದ ಬಲವಂತದ ಹಣ ವಸೂಲಿ ಮಾಡುವುದು ಸರ್ವೇ ಸಾಮಾನ್ಯವಾಗಿತ್ತು. ಈ ಹಿಂದೆ ಕೂಡಾ ಕುಂಟಿಕಾನ ಕೆಳಸೇತುವೆ ಬಳಿ ಇದೇ ರೀತಿ ಅಸಭ್ಯವಾಗಿ ನಿಂತು ಕಿರುಕುಳ ನೀಡುತ್ತಿದ್ದು ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿತ್ತು. ಪ್ರತಿಭಟನೆ ಕೂಡಾ ನಡೆದಿತ್ತು. ಇಲ್ಲಿ ನಿಂತು ಅಸಭ್ಯವಾಗಿ ವರ್ತಿಸಬಾರದೆಂದು ಉರ್ವ ಪೊಲೀಸರು ಮಂಗಳಮುಖಿಯರಿಗೆ ಎಚ್ಚರಿಕೆ ನೀಡಿದ್ದರು. ಇದೇ ಜಾಗದಲ್ಲಿ ಶನಿವಾರ ರಾತ್ರಿಯೂ ಇಂತಹ ಚಟುವಟಿಕೆ ನಡೆದಿದ್ದು, ಅನ್ಯ ಜಿಲ್ಲೆಗಳಿಂದ ಬಂದ ಕೆಲವು ಮಂಗಳಮುಖಿಯರು ಸಾರ್ವಜನಿಕರೊಂದಿಗೆ ಅಸಭ್ಯ ರೀತಿಯಲ್ಲಿ ವರ್ತಿಸುವುದರ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು.
ಪೊಲೀಸರ ಕರ್ತವ್ಯಕ್ಕೆ ಅಡ್ಡಿ, 13 ಮಂದಿ ಮಂಗಳಾಮುಖಿಯರನ್ನು ಬಂಧನ: ಶನಿವಾರ ರಾತ್ರಿಯೂ ಇದೇ ರೀತಿಯ ಕಿರುಕುಳ, ಅಸಭ್ಯ ವರ್ತನೆ ಪುನರಾವರ್ತನೆಯಾದಾಗ ಕೆಲವು ಮಂಗಳಮುಖಿಯರನ್ನು ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ. ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ ಉರ್ವ ಠಾಣಾ ಇನ್ಸ್ಪೆಕ್ಟರ್ ಭಾರತಿ ಹಾಗೂ ಸಬ್ ಇನ್ಸ್ಪೆಕ್ಟರ್, ಹೆಚ್ಚವರಿ ಸಿಬ್ಬಂದಿಯೊಂದಿಗೆ ಆಗಮಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಕಾರಣ 13 ಮಂದಿ ಮಂಗಳಾಮುಖಿಯರನ್ನು ಬಂಧಿಸಿ ನ್ಯಾಯಾಧೀಶರೆದುರು ಹಾಜರು ಪಡಿಸಿದ್ದಾರೆ. ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಆರೋಪದ ಮೇಲೆ 13 ಮಂದಿ ಮಂಗಳಮುಖಿಯರ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ. ನಗರದಲ್ಲಿನ ಅನೈತಿಕ ಚಟುವಟಿಕೆ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನಡೆಸುವ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.