ಮಂಗಳೂರು: ಮಂಗಳೂರು ಕಮಿಷನರ್ ಕುಲದೀಪ್ ಜೈನ್ ರಸ್ತೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 14 ದಿನಗಳ ಅವಧಿಯಲ್ಲಿ ರಸ್ತೆ ನಿಮಯ ಉಲ್ಲಂಘಿಸಿದ 222 ಮಂದಿಗೆ ಚಾಲನಾ ಪರವಾನಗಿ ರದ್ದುಗೊಳಿಸಲು ಆರ್ ಟಿಒಗೆ ಶಿಫಾರಸು ಮಾಡಿದ್ದಾರೆ. ಜುಲೈ 13ರಿಂದ 26ರ ವರೆಗಿನ ಅವಧಿಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಒಟ್ಟು 222 ಮಂದಿ ಚಾಲನಾ ಪರವಾನಗಿ ರದ್ದುಪಡಿಸಲು ಆರ್‌ಟಿಒಗೆ ಶಿಫಾರಸು ಪತ್ರ ಬರೆದಿದ್ದಾರೆ.
ಯಾವುದೆಲ್ಲ ನಿಯಮ ಉಲ್ಲಂಘನೆ: ಈ ಪೈಕಿ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯ ಕಾರಣಕ್ಕೆ ಕೇಸು ಹಾಕಿಸಿಕೊಂಡ 113 ಮಂದಿ ಇದ್ದಾರೆ, ಕುಡಿದು ವಾಹನ ಚಲಾಯಿಸಿದ ಒಬ್ಬರಿದ್ದಾರೆ. ಗೂಡ್ಸ್ ವಾಹನದಲ್ಲಿ ಪ್ರಯಾಣಿಕರನ್ನು ಒಯ್ದಿರುವ ಬಗ್ಗೆ 15 ಪ್ರಕರಣಗಳಿವೆ. ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಮಾಡಿದ ನಾಲ್ಕು ಪ್ರಕರಣ ಇದೆ. ರೆಡ್ ಸಿಗ್ನಲ್ ಜಂಪ್ ಮಾಡಿರುವ 5 ಪ್ರಕರಣಗಳಿವೆ. ಟ್ಯಾಕ್ಸಿ ವಾಹನಗಳಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಒಯ್ದಿರುವ 4 ಪ್ರಕರಣ, ತ್ರಿಬಲ್ ರೈಡಿಂಗ್ ಮೂರು ಕೇಸು, ಹೆಲ್ಮೆಟ್ ರಹಿತ ದ್ವಿಚಕ್ರ ವಾಹನ ಚಾಲನೆ ಮಾಡಿದ 59 ಪ್ರಕರಣಗಳಿದ್ದು, ಸೀಟ್ ಬೆಲ್ಟ್ ಇಲ್ಲದೆ ಕಾರು ಚಲಾಯಿಸಿದ 17 ಪ್ರಕರಣ ಇದೆ. 14 ದಿನಗಳ ಅವಧಿಯಲ್ಲಿ ಒಟ್ಟು ದಾಖಲಾಗಿರುವ ಎಲ್ಲ ಪ್ರಕರಣಗಳಲ್ಲಿಯೂ ಚಾಲನಾ ಪರವಾನಗಿ ರದ್ದುಪಡಿಸಲು ಸಂಚಾರಿ ಪೊಲೀಸರು ಆರ್ಟಿಓಗೆ ಬರೆಯಲು ಮುಂದಾಗಿದ್ದಾರೆ.