ಬೆಂಗಳೂರು: ಬಿಟೆಕ್ ಪರೀಕ್ಷೆ ವೇಳೆ ಮೊಬೈಲ್ ಫೋನ್ ಬಳಸಿ ಸಿಕ್ಕಿಬಿದ್ದ 19 ವರ್ಷದ ವಿದ್ಯಾರ್ಥಿ ಕಾಲೇಜು ಕಟ್ಟಡದಿಂದ ಹಾರಿ ಸಾವಿಗೀಡಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದಕ್ಷಿಣ ಬೆಂಗಳೂರಿನ ಗಿರಿನಗರ ಸಮೀಪದ ಪಿಇಎಸ್ ಕಾಲೇಜಿನಲ್ಲಿ ಬಿಟೆಕ್ ವಿದ್ಯಾರ್ಥಿಯಾಗಿರುವ ಆದಿತ್ಯ ಪ್ರಭು ಎಂಬಾತ ಸೋಮವಾರ ಮಧ್ಯಾಹ್ನ 1.20 ರ ಸುಮಾರಿಗೆ ಎರಡನೇ ಸೆಮಿಸ್ಟರ್ ಪರೀಕ್ಷೆಯ ವೇಳೆ ಫೋನ್ ಬಳಸಿ ಸಿಕ್ಕಿಬಿದ್ದಿದ್ದಾನೆ.
ಈ ವೇಳೆ ಇನ್ವಿಜಿಲೇಟರ್ ಆತನನ್ನು ಪರೀಕ್ಷಾ ನಿಯಂತ್ರಕರಿಗೆ ಹಸ್ತಾಂತರಿಸಿದ್ದಾರೆ. ವಿದ್ಯಾರ್ಥಿಯ ಪೋಷಕರನ್ನು ಬರುವಂತೆ ಹೇಳಲಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಲೇಜು ಅಧಿಕಾರಿಗಳು ಆತನನ್ನು ಕೌನ್ಸೆಲಿಂಗ್‌ಗೆ ಕಳುಹಿಸಲು ಯೋಜಿಸಿದ್ದರು. ಆದರೆ, ಅವರ ಪೋಷಕರು ಕಾಲೇಜಿಗೆ ಬರುವಷ್ಟರಲ್ಲಿ ಪ್ರಭು 13 ಅಂತಸ್ತಿನ ಕಟ್ಟಡದ ಮೇಲಿನ ಮಹಡಿಗೆ ಓಡಿ ಕೆಳಗೆ ಹಾರಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇದು ಕ್ಷಣಿಕ ಭಯದಿಂದ ನಡೆದಿರುವ ಕೃತ್ಯವಾಗಿದ್ದು, ಪ್ರಭು ಅವರಿಗೆ ಯಾವುದೇ ಮಾನಸಿಕ ಅಸ್ವಸ್ಥತೆ ಅಥವಾ ಕಿರುಕುಳ ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳೂರು ಮೂಲದ ಆದಿತ್ಯ ಪ್ರಭು ಅವರು ಗಿರಿನಗರದ ಪ್ರೆಸ್ಟೀಜ್ ಗ್ರೂಪ್ ಅಪಾರ್ಟ್‌ಮೆಂಟ್‌ನಲ್ಲಿ ಕುಟುಂಬ ಸಮೇತ ವಾಸವಿದ್ದರು.